ಪುಣೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪ್ರತಿ ತಂಡದಲ್ಲಿ ಡೋಲು, ತಾಶಾ ಮತ್ತು ಝಂಜ್ ವಾದಕರ ಸಂಖ್ಯೆ 30 ಮೀರದಂತೆ ನೋಡಿಕೊಳ್ಳಬೇಕು ಎಂದು ಪುಣೆ ಪೊಲೀಸರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಗುರುವಾರ ತಡೆ ಹಿಡಿದಿದೆ [ಯುವ ವಾದ್ಯ ಪಾಠಕ್ ಟ್ರಸ್ಟ್ ಮತ್ತು ಡಾ ಕಲ್ಯಾಣಿ ಮಂಡ್ಕೆ ಇನ್ನಿತರರ ನಡುವಣ ಪ್ರಕರಣ].
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಎನ್‌ಜಿಟಿ ಆದೇಶ ಗಣೇಶ ಹಬ್ಬದ ವೇಳೆ ಡೋಲು, ತಾಶಾ ಪ್ರದರ್ಶನ ನೀಡುವವರ ಮೇಲೆ ಪರಿಣಾಮ ಬೀರಲಿದ್ದು ಅವರು ವಾದ್ಯಗಳನ್ನು ಬಾರಿಸಲಿ. ಇದು ನಡೆಯುವುದು ಪುಣೆಯ ಹೃದಯಭಾಗದಲ್ಲಿ ಎಂದು ನ್ಯಾಯಾಲಯ ತಿಳಿಸಿತು.
ಪುಣೆಯಲ್ಲಿ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಶಬ್ದದ ಮಟ್ಟ ನಿಯಂತ್ರಿಸಲು ಆಗಸ್ಟ್ 30ರಂದು ಎನ್‌ಜಿಟಿ ಪಶ್ಚಿಮ ವಲಯ ಪೀಠ ಹೊರಡಿಸಿದ್ದ ವಿವಿಧ ನಿರ್ದೇಶನಗಳಲ್ಲಿ ವಾದ್ಯಗಾರರ ಸಂಖ್ಯೆ ಮಿತಗೊಳಿಸುವುದೂ ಒಂದಾಗಿತ್ತು. ಒಂದು ವೇಳೆ ಹೆಚ್ಚಿನ ಸಂಖ್ಯೆಯ ವಾದ್ಯಗಾರರಿದ್ದರೆ ಅಂತಹ ತಂಡವನ್ನು ಬಂಧಿಸಬೇಕು ಎಂದು ಕೂಡ ನಿರ್ದೇಶನ ನೀಡಲಾಗಿತ್ತು.
ಇದನ್ನು ಪ್ರಶ್ನಿಸಿ ಯುವ ವಾದ್ಯ ಪಾಠಕ್ ಟ್ರಸ್ಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಯಾವುದೇ ಪರಿಶೀಲನೆ ಅಥವಾ ವೈಜ್ಞಾನಿಕ ವಿಶ್ಲೇಷಣೆ ನಡೆಸದೆ ಎನ್‌ಜಿಟಿ ನಿರ್ದೇಶನ ನೀಡಿದೆ ಎಂದು ಅದು ದೂರಿತ್ತು. ಸೆಪ್ಟೆಂಬರ್ 17ರಂದು ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ವಾದ್ಯಗಾರರು, ಡೋಲು ತಂಡಗಳ ಬಗ್ಗೆ ಪೂರ್ವಾಗ್ರಹ ಉಂಟಾಗುವುದರಿಂದ ತುರ್ತಾಗಿ ಪ್ರಕರಣ ಪರಿಗಣಿಸುವಂತೆ ಕೋರಲಾಗಿತ್ತು.