ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಯಾಗಿರುವ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರಿಗೆ ನೋಟಿಸ್ ಜಾರಿ ಮಾಡಿದೆ. ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಮತ್ತು ಕುಟುಂಬ ಸದಸ್ಯರು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತ್ತಿತರ ಆರೋಪಿಗಳ ವಿರುದ್ಧದ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿಲ್ಲ.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಯಡಿಯೂರಪ್ಪ, ಪುತ್ರ ಬಿ ವೈ ವಿಜಯೇಂದ್ರ, ಶಶಿಧರ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ಅಂದಿನ ಬಿಡಿಎ ಅಧ್ಯಕ್ಷ ಹಾಗೂ ಹಾಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಐಎಎಸ್ ಅಧಿಕಾರಿ ಡಾ. ಜಿ ಸಿ ಪ್ರಕಾಶ್, ಕೆ ರವಿ, ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ಅವರ ವಿರುದ್ಧ ಅಬ್ರಹಾಂ ಅವರು ನೀಡಿದ್ದ ಖಾಸಗಿ ದೂರನ್ನು ಮರು ವಿಚಾರಣೆ ನಡೆಸಿ, ಆದೇಶ ಮಾಡುವಂತೆ ಈಚೆಗೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿತ್ತು. ರಾಜ್ಯಪಾಲರಿಂದ ಪೂರ್ವಾನುಮತಿ ಪಡೆದಿಲ್ಲ ಎಂದು 2021ರಲ್ಲಿ ವಿಶೇಷ ನ್ಯಾಯಾಲಯವು ಖಾಸಗಿ ದೂರನ್ನು ವಜಾ ಮಾಡಿತ್ತು.
“ಸಾರ್ವಜನಿಕ ಸೇವಕರನ್ನು ಒಳಗೊಂಡಿರುವ ಪ್ರಕರಣದಲ್ಲಿ ಅವರ ವಿರುದ್ಧದ ವಿಚಾರಣೆಗೆ ಪೂರ್ವಾನುಮತಿ ಪಡೆಯುವುದು ಅಗತ್ಯ. ಆದರೆ, ಹೈಕೋರ್ಟ್ ಆದೇಶದಲ್ಲಿ ಅದನ್ನು ಉಲ್ಲಂಘಿಸಲಾಗಿದೆ” ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
“ಪೂರ್ವಾನುಮತಿ ಪಡೆಯದೇ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ಮ್ಯಾಜಿಸ್ಟ್ರೇಟ್ ಅವರು ತನಿಖೆಗೆ ಆದೇಶಿಸಲಾಗದು ಎಂದು ಎಂ ಕೆ ಅಯ್ಯಪ್ಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ಉಲ್ಲಂಘಿಸಿದೆ” ಎಂದು ಬಿಎಸ್‌ವೈ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ ಮತ್ತು ಸಿದ್ಧಾರ್ಥ ದವೆ ಅವರು ವಾದಿಸಿದರು.