Bar Elections 
ಸುದ್ದಿಗಳು

ರಾಜ್ಯ ವಕೀಲರ ಪರಿಷತ್‌ಗಳಿಗೆ ಚುನಾವಣೆ: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲಿದೆ ಸುಪ್ರೀಂ

ತಾನು ಹೆಸರಿಸಲಿರುವ ನಿವೃತ್ತ ನ್ಯಾಯಮೂರ್ತಿಗಳು ಚುನಾವಣೆಗಳನ್ನು ನೇರವಾಗಿ ಮೇಲ್ವಿಚಾರಣೆ ಮಾಡುವ ಸ್ವತಂತ್ರ/ಬಹು-ಸದಸ್ಯ ಸಮಿತಿಗಳನ್ನು ರಚಿಸಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ರಾಜ್ಯ ವಕೀಲರ ಪರಿಷತ್‌ಗಳ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಪ್ರತಿ ರಾಜ್ಯಕ್ಕೆ ಒಬ್ಬರು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ಈಚೆಗೆ ನಿರ್ಧರಿಸಿದೆ [ಎಂ ವರದನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

 ವಕೀಲರ ಪರಿಷತ್ತುಗಳೇ ಚುನಾವಣೆ ಮೇಲೆ ಸಂಪೂರ್ಣ ಸ್ವಾಯತ್ತತೆ ಸಾಧಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.

ರಾಜ್ಯ ವಕೀಲರ ಪರಿಷತ್ತು ಮಾತ್ರವೇ ಚುನಾವಣೆ ನಡೆಸಲು ನಾವು ಬಿಡುವುದಿಲ್ಲ. ಚುನಾವಣೆಯನ್ನು ಮೇಲ್ವಿಚಾರಣೆ ಮಾಡಲು ನಾವು ಕೆಲ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುತ್ತೇವೆ. ಅವರು ಚುನಾವಣಾ ಆಯೋಗದಂತೆ ಮೇಲ್ವಿಚಾರಣೆ ಮಾಡುತ್ತಾರೆ ಎಂದು ನ್ಯಾ. ಸೂರ್ಯಕಾಂತ್‌ ತಿಳಿಸಿದರು.

ಚುನಾವಣೆಗಳ ಮೇಲ್ವಿಚಾರಣೆಗೆ ನೇಮಕ ಮಾಡಲು ಉದ್ದೇಶಿಸಿರುವ ನ್ಯಾಯಮೂರ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲು ಅನುವಾಗುವಂತೆ ಯಾವ ರಾಜ್ಯಗಳಲ್ಲಿ ಈಗಾಗಲೇ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ ಎಂಬುದರ ವಿವರ ಒದಗಿಸುವಂತೆ ನ್ಯಾಯಾಲಯ ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್‌ ಮಿಶ್ರಾ ಅವರಿಗೆ ಸೂಚಿಸಿತು.

ಪರಿಷತ್ತುಗಳ ಚುನಾವಣೆ ಪದೇ ಪದೇ ಮುಂದೆ ಹೋಗುತ್ತಿರುವುದರ ಬಗ್ಗೆ ಇದೇ ವೇಳೆ ಪೀಠ ಆತಂಕ ವ್ಯಕ್ತಪಡಿಸಿತು. ಕಾನೂನು ಪದವಿ ಪರಿಶೀಲನೆ ಮತ್ತಿತರ ನೆಪಗಳನ್ನೊಡ್ಡಿ ಚುನಾವಣೆ ಮುಂದೂಡುವಂತಿಲ್ಲ ಎಂದು ಅದು ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 18ರಂದು ನಡೆಯಲಿದೆ.

[ಆದೇಶದ ಪ್ರತಿ]

M_Varadhan_vs__Union_of_India___Anr__.pdf
Preview