Supreme Court Demonetisation Bench
Supreme Court Demonetisation Bench 
ಸುದ್ದಿಗಳು

ನೋಟು ಅಮಾನ್ಯೀಕರಣ ಪ್ರಕರಣ: ಜ. 2ಕ್ಕೆ ತೀರ್ಪು ನೀಡಲಿರುವ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ

Bar & Bench

ಕೇಂದ್ರ ಸರ್ಕಾರ 2016ರಲ್ಲಿ ಕೈಗೊಂಡಿದ್ದ ನೋಟು ರದ್ದತಿ ನಿರ್ಧಾರ ಪ್ರಶ್ನಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಜನವರಿ 2, 2023ರಂದು ತೀರ್ಪು ನೀಡಲಿದೆ.

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಹಾಗೂ ಬಿ ವಿ ನಾಗರತ್ನ ಅವರಿರುವ ಸಾಂವಿಧಾನಿಕ ಪೀಠ ಡಿ. 7ರಂದು ತೀರ್ಪು ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್‌ನ ಪ್ರಕರಣಗಳ ಪಟ್ಟಿ ಹೇಳುವ ಪ್ರಕಾರ ನ್ಯಾ.  ಗವಾಯಿ ಅವರು ರಚಿಸಿದ ಸರ್ವಾನುಮತದ ತೀರ್ಪು ಇದಾಗಿದೆ.

ನೋಟು ಅಮಾನ್ಯೀಕರಣ ಕುರಿತಾದ ಹನ್ನೊಂದು ಕಾನೂನು ಪ್ರಶ್ನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ನಿರ್ಧಾರ ಕೈಗೊಂಡ ಆರು ವರ್ಷಗಳಲ್ಲಿ ವಿವಿಧ ಆಕ್ಷೇಪಗಳನ್ನು ಎತ್ತಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಾಯಿದೆಯ ಸೆಕ್ಷನ್‌ 26 (2) ವಿಸ್ತೃತವಾಗಿದ್ದು, ಇದನ್ನು ಬಳಸಿ ನಿರ್ಧಾರ ಕೈಗೊಂಡಿರುವ ಪ್ರಕ್ರಿಯೆಯು ಆಳವಾದ ತಪ್ಪಿನಿಂದ ಕೂಡಿದೆ. ನೋಟು ರದ್ದತಿಯ ಶಿಫಾರಸು ಅಗತ್ಯ ಅಂಶಗಳನ್ನು ಪರಿಗಣಿಸಿಲ್ಲ. ನೋಟು ರದ್ದತಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ದೋಷಪೂರಿತವಾಗಿದೆ, ನೋಟು ಅಮನ್ಯೀಕರಣ ತನ್ನ ಉದ್ದೇಶಿತ ಗುರಿ ಸಾಧಿಸಿಲ್ಲ, ಅನುಪಾತದ ಪರೀಕ್ಷೆಯಲ್ಲಿ ನೋಟು ರದ್ದತಿ ನಿರ್ಧಾರ ವಿಫಲವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.  

ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌, ಆರ್‌ಬಿಐ ಪರವಾಗಿ ಜೈದೀಪ್‌ ಗುಪ್ತಾ, ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ, ಹಿರಿಯ ನ್ಯಾಯವಾದಿ ಹಾಗೂ ಕೇಂದ್ರ ಸರ್ಕಾರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ವಾದ ಮಂಡಿಸಿದ್ದರು.