Supreme Court  
ಸುದ್ದಿಗಳು

ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ತಲಾಖ್-ಎ-ಹಸನ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ

ಲಿಂಗ ಮತ್ತು ಧರ್ಮ ತಟಸ್ಥ ವಿಧಾನದ ಮೂಲಕ ವಿಚ್ಛೇದನ ಪ್ರಕ್ರಿಯೆ ನಡೆಯಬೇಕು ಎಂದು ಅರ್ಜಿ ಕೋರಿದೆ.

Bar & Bench

ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ತಲಾಖ್‌-ಎ-ಹಸನ್‌ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ [ಬೆನಜೀರ್ ಹೀನಾ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ].

ತಲಾಖ್‌-ಎ-ಹಸನ್ ಪದ್ದತಿ ಅತಾರ್ಕಿಕ, ಅವಾಸ್ತವಿಕ ಹಾಗೂ ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದ್ದು ಇದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಪತ್ರಕರ್ತೆ ಬೆನಜೀರ್ ಹೀನಾ ಅವರು ಅಡ್ವೊಕೇಟ್-ಆನ್-ರೆಕಾರ್ಡ್ ಅಶ್ವನಿ ಕುಮಾರ್ ದುಬೆ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಕೋರಿದ್ದರು.

ಅರ್ಜಿದಾರರ ಪತಿ ಜೂನ್ 19ರಂದು ಮೂರನೇ ಬಾರಿ ತಲಾಖ್‌ ಘೋಷಿಸಲಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ತುರ್ತು ವಿಚಾರಣೆ ಆಧಾರದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ್‌ ಅವರು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಹಾಗೂ ವಿಕ್ರಮ್‌ ನಾಥ್‌ ಅವರ ಪೀಠದ ಮುಂದೆ ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ ನಾಳೆ ಪ್ರಕರಣದ ವಿಚಾರಣೆಗೆ ಒಪ್ಪಿಗೆ ಸೂಚಿಸಿತು.

ಕಳೆದ ತಿಂಗಳು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ತ್ರಿವೇದಿ ಅವರಿದ್ದ ರಜಾಕಾಲೀನ ಪೀಠ ತುರ್ತು ವಿಚಾರಣೆಗೆ ನಿರಾಕರಿಸಿದರೂ ಪ್ರಕರಣವನ್ನು ಮತ್ತೊಮ್ಮೆ ಪ್ರಸ್ತಾಪಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತ್ತು.

ವರದಕ್ಷಿಣೆ ನೀಡಲು ನಿರಾಕರಿಸಿದ್ದರಿಂದ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಪತಿ ಏಪ್ರಿಲ್ 19ರಂದು ವಕೀಲರ ಮೂಲಕ ತಲಾಖ್-ಎ-ಹಸನ್ ನೋಟಿಸ್ ಕಳುಹಿಸಿ ವಿಚ್ಛೇದನ ನೀಡಿದ್ದಾರೆ ಎಂದು ಅರ್ಜಿದಾರೆ ದೂರಿದ್ದರು. ಲಿಂಗ ಮತ್ತು ಧರ್ಮ ತಟಸ್ಥ ವಿಧಾನದ ಮೂಲಕ ವಿಚ್ಛೇದನ ಪ್ರಕ್ರಿಯೆ ನಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.