ವಿಕಲಚೇತನ ವಕೀಲರಿಗೆ ವಕೀಲರ ಪರಿಷತ್ತುಗಳು ಮತ್ತು ವಕೀಲರ ಸಂಘಗಳಲ್ಲಿ ಹುದ್ದೆಗಳನ್ನು ಮೀಸಲಿರಿಸಬಹುದೇ ಎಂಬುದನ್ನು ಪರಿಗಣಿಸಲು ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ನವೆಂಬರ್ 3ರಂದು ಸುಪ್ರೀಂ ಕೋರ್ಟ್ ಸೂಚಿಸಿದೆ [ಅಮಿತ್ ಕುಮಾರ್ ಯಾದವ್ ಮತ್ತು ಭಾರತೀಯ ವಕೀಲರ ಪರಿಷತ್ತು ಇನ್ನಿತರರ ನಡುವಣ ಪ್ರಕರಣ].
ವಕೀಲ ಅಮಿತ್ ಕುಮಾರ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಸಲಹೆ ನೀಡಿದೆ.
ವಿಕಲಚೇತನ ವಕೀಲರಿಗಾಗಿ ನ್ಯಾಯವಾದಿಗಳ ಸಂಘ ಸಂಸ್ಥೆಗಳಲ್ಲಿ ಕೆಲವು ಹುದ್ದೆಗಳನ್ನು ಕಾಯ್ದಿರಿಸುವಂತೆ ಬಿಸಿಐ ಮತ್ತು ಉತ್ತರ ಪ್ರದೇಶದ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಬೇಕೆಂದು ಯಾದವ್ ನ್ಯಾಯಾಲಯವನ್ನು ಕೋರಿದ್ದರು.
ಆದರೆ ಉತ್ತರ ಪ್ರದೇಶ ವಕೀಲರ ಪರಿಷತ್ತಿನ ಚುನಾವಣೆ ಘೋಷಣೆಯಾಗಿರುವುದನ್ನು ಅರಿತ ನ್ಯಾಯಾಲಯ ನಿರ್ದೇಶನ ನೀಡಲು ನಿರಾಕರಿಸಿತು. ಆದರೆ ಇದು ಮೂಲತಃ ನೀತಿ ನಿರ್ಧಾರದ ವಿಚಾರ ಎಂಬುದನ್ನು ಗಮನಿಸಿದ ನ್ಯಾಯಾಲಯ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಸಿಐಗೆ ಸೂಚಿಸಿತು.
"ವಿಕಲಚೇತನ ವ್ಯಕ್ತಿಗಳಿಗೆ ನೀಡಲಾಗುವ ಮೀಸಲಾತಿ ಮೂಲತಃ ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಸಂವಿಧಾನದಲ್ಲಿ ಸಮಾನತೆಗೆ ಸಂಬಂಧಿಸಿದ ತತ್ವಗಳಿಂದ ಹೊರಹೊಮ್ಮಿದ ಕಾನೂನು ನೀತಿಗಳು ಮತ್ತು ವಿಧಿಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರು ಮಂಡಿಸಿರುವ ಸಂಗತಿಯನ್ನು ಪರಿಗಣಿಸುವಂತೆ ಭಾರತ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡುವ ಮೂಲಕ ರಿಟ್ ಅರ್ಜಿ ವಿಲೇವಾರಿ ಮಾಡುತ್ತಿದ್ದೇವೆ" ಎಂದು ನವೆಂಬರ್ 3 ರ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಂಬಂಧಪಟ್ಟ ಪಾಲುದಾರರಿಗೆ ಮುಕ್ತ ಅವಕಾಶವಿದೆ ಎಂದ ನ್ಯಾಯಾಲಯ ಯಾದವ್ ಅವರ ಅರ್ಜಿಯನ್ನು ಮುಕ್ತಾಯಗೊಳಿಸಿತು.