ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರ ಸಚಿವ ಸಂಪುಟದ ಸಹಾಯ, ಸೂಚನೆ ಪಡೆಯದೆ ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ಹತ್ತು ಮಂದಿ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು, ಸೋಮವಾರ ತೀರ್ಪು ನೀಡಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿರುವ ಪೀಠ ತೀರ್ಪು ಪ್ರಕಟಿಸಲಿದೆ.
ನ್ಯಾಯಾಲಯ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಸುಮಾರು 15 ತಿಂಗಳ ಬಳಿಕ ತೀರ್ಪು ಹೊರಬೀಳುತ್ತಿದೆ.
ದೆಹಲಿಯ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಕೇಂದ್ರವೊಂದಕ್ಕೆ ಮಳೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ ಘಟನೆ ಕುರಿತಂತೆ ದೆಹಲಿ ಪಾಲಿಕೆ ಟೀಕೆಗೆ ತುತ್ತಾಗಿರುವ ಬೆನ್ನಲ್ಲೇ ಈ ತೀರ್ಪು ಮಹತ್ವ ಪಡೆದುಕೊಂಡಿದೆ.
ಗಮನಾರ್ಹವಾಗಿ, ತೀರ್ಪಿನ ಬಾಕಿ ಇರುವ ಕಾರಣಕ್ಕೆ, ಪಾಲಿಕೆಯ ಸ್ಥಾಯಿ ಸಮಿತಿಯನ್ನು ರಚಿಸಲು ಸಾಧ್ಯವಾಗಿರಲಿಲ್ಲ. ಹತ್ತು ನಾಮ ನಿರ್ದೇಶಿತ ಸದಸ್ಯರೇ ಈ ಸಮಿತಿಯನ್ನು ಆಯ್ಕೆ ಮಾಡುವ ಅಂಗದ ಭಾಗವಾಗಿದ್ದಾರೆ.
ಲೆ. ಗವರ್ನರ್ ಅವರು 1991ರಲ್ಲಿ ಚುನಾಯಿತ ಸರ್ಕಾರವನ್ನು ಸಂಪೂರ್ಣ ಬದಿಗೆ ಸರಿಸಿದ್ದರಿಂದ ಸಂವಿಧಾನದ 239 ಎಎ ವಿಧಿ ಜಾರಿಗೆ ಬಂದಿತ್ತು. ಅದಾದ ಬಳಿಕ ಚುನಾಯಿತ ಸರ್ಕಾರವನ್ನು ಸಂಪೂರ್ಣವಾಗಿ ಬದಿಗಿಟ್ಟು ಲೆ. ಗವರ್ನರ್ ನಾಮನಿರ್ದೇಶನ ಮಾಡಿರುವುದು ಇದೇ ಮೊದಲು ಎಂದು ದೆಹಲಿ ಸರ್ಕಾರ ದೂರಿತ್ತು.
ಇದಲ್ಲದೆ, ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ಎಲ್‌ಜಿ ಬದ್ಧರಾಗಿರಬೇಕು. ಭಿನ್ನಾಭಿಪ್ರಾಯವಿದ್ದಲ್ಲಿ ಅವರು ಸಮಸ್ಯೆಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಬಹುದು ಎಂದು ಸರ್ಕಾರದ ಅರ್ಜಿ ತಿಳಿಸಿತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದೆಹಲಿ ಲೆ. ಗವರ್ನರ್ ವಿಕೆ ಸಕ್ಸೇನಾ ಅವರ ಪ್ರತಿಕ್ರಿಯೆ ಕೇಳಿತ್ತು. ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್ ಅವರು ಇಂತಹ ನಾಮನಿರ್ದೇಶನ ದೆಹಲಿ ಪಾಲಿಕೆಯ ಪ್ರಜಾಸತ್ತಾತ್ಮಕ ಕಾರ್ಯವನ್ನು ಅಸ್ಥಿರಗೊಳಿಸಬಹುದು ಎಂದಿದ್ದರು. ಮೇ 2023ರಲ್ಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.
ಪಾಲಿಕೆ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಎಂದು ಮೇಯರ್ ಶೆಲ್ಲಿ ಒಬೆರಾಯ್ ಕಳವಳ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಸ್ಥಾಯಿ ಸಮಿತಿಯ ಕಾರ್ಯಗಳನ್ನು ನಿರ್ವಹಿಸಲು ಪಾಲಿಕೆಗೆ ಅನುಮತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.
ದೆಹಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಕೀಲ ಶದಾನ್ ಫರಾಸತ್ ಮತ್ತು ನತಾಶಾ ಮಹೇಶ್ವರಿ ವಾದ ಮಂಡಿಸಿದ್ದರು. ಲೆ. ಗವರ್ನರ್ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಪ್ರತಿನಿಧಿಸಿದ್ದರು.