ಸುದ್ದಿಗಳು

ಇಂಡಿಯಾ ಜಸ್ಟೀಸ್‌ ರಿಪೋರ್ಟ್ 2022: ದೊಡ್ಡ ರಾಜ್ಯಗಳಲ್ಲಿ ತಮಿಳುನಾಡು, ಚಿಕ್ಕ ರಾಜ್ಯಗಳಲ್ಲಿ ಸಿಕ್ಕಿಂಗೆ ಅಗ್ರಸ್ಥಾನ

ವರದಿಯು ಪ್ರತಿ ರಾಜ್ಯದ ನ್ಯಾಯಾಂಗ ವೈವಿಧ್ಯತೆ, ಮೂಲಸೌಕರ್ಯ, ಪ್ರಕರಣಗಳ ಬಾಕಿ ಉಳಿಕೆ ಹಾಗೂ ಬಜೆಟ್ ಅಂಕಿಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

Bar & Bench

ದೇಶದಲ್ಲಿ ನ್ಯಾಯದಾನಕ್ಕೆ ಇರುವ ಪೂರಕವಾದ ಅಂಶಗಳನ್ನು ಪರಿಗಣಿಸಿ ಸಿದ್ಧಪಡಿಸಲಾಗುವ 'ಇಂಡಿಯಾ ಜಸ್ಟೀಸ್‌ ರಿಪೋರ್ಟ್‌ 2022' ಪ್ರಕಾರ, ಸತತ ಮೂರನೇ ಬಾರಿಗೆ, ತಮಿಳುನಾಡು ನ್ಯಾಯಾಂಗವು ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದು ಸಿಕ್ಕಿಂ ಸಣ್ಣ ರಾಜ್ಯಗಳಲ್ಲಿ ತನ್ನ ಅಗ್ರಸ್ಥಾನ ಕಾಯ್ದುಕೊಂಡಿದೆ. ನ್ಯಾಯದಾನದ ಒಟ್ಟು ಪ್ರಕ್ರಿಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಏಪ್ರಿಲ್ 4 ರಂದು ಬಿಡುಗಡೆಯಾದ ವರದಿಯ ಮೂರನೇ ಆವೃತ್ತಿಯು 1 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರುವ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳು ಮತ್ತು 1 ಕೋಟಿಯವರೆಗೆ ಜನಸಂಖ್ಯೆಯುಳ್ಳ  7 ಸಣ್ಣ ಗಾತ್ರದ ರಾಜ್ಯಗಳ ನ್ಯಾಯಾಂಗವನ್ನು ಶ್ರೇಣೀಕರಿಸಿದೆ.

ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್, ದಕ್ಷ್, ಕಾಮನ್ ಕಾಸ್, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, ಟಿಐಎಸ್ಎಸ್-ಪ್ರಯಾಸ್ ಮತ್ತು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸೇರಿದಂತೆ ಹಲವಾರು ನಾಗರಿಕ ಸಮಾಜ ಸಂಸ್ಥೆಗಳ ಪ್ರತಿನಿಧಿಗಳು ವರದಿ  ಸಿದ್ಧಪಡಿಸಿದ್ದಾರೆ.

ನ್ಯಾಯಾಧೀಶರು, ಹೈಕೋರ್ಟ್‌ ಸಿಬ್ಬಂದಿ ಹುದ್ದೆ ಭರ್ತಿಯಲ್ಲಿ ಹೆಚ್ಚಳ, ಜಿಲ್ಲಾ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಏರಿಕೆ, ಪ್ರಕರಣಗಳ ವಿಲೇವಾರಿಯಲ್ಲಿ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಸಣ್ಣ ರಾಜ್ಯಗಳ ಪೈಕಿ, ಆರನೇ ಸ್ಥಾನದಲ್ಲಿದ್ದ ತ್ರಿಪುರ ಇದೀಗ ಎರಡನೇ ಸ್ಥಾನ ಅಲಂಕರಿಸಿದೆ. ಇಂಥದ್ದೇ ಕಾರಣಗಳಿಗೆ ಮೇಘಾಲಯ ಏಳನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ.

ಆದರೆ, ಹೈಕೋರ್ಟಿನಲ್ಲಿ ನ್ಯಾಯಾಧೀಶರು ಮತ್ತು ಸಿಬ್ಬಂದಿ ಹುದ್ದೆ ಖಾಲಿ ಇರುವಿಕೆ, ಪ್ರಕರಣಗಳ ವಿಲೇವಾರಿ ದರ ನ್ಯಾಯಾಲಯ ಕಟ್ಟಡ ಕೊರತೆಯ ಕಾರಣಕ್ಕೆ ಹಿಮಾಚಲ ಪ್ರದೇಶ ಎರಡನೇ ಸ್ಥಾನದಿಂದ ಆರನೇ ಸ್ಥಾನಕ್ಕೆ, ಗೋವಾ ನಾಲ್ಕನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿತ ಕಂಡಿವೆ.

ವಿವಿಧತೆ

ಜಿಲ್ಲಾ-ನ್ಯಾಯಾಲಯ ಮಟ್ಟದಲ್ಲಿ, ಯಾವುದೇ ರಾಜ್ಯವಾಗಲಿ ಅಥವಾ ಕೇಂದ್ರಾಡಳಿತ ಪ್ರದೇಶವಾಗಲಿ ತನ್ನ ಎಲ್ಲಾ ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾಗಳಡಿ ಲಭ್ಯವಿರುವ ಹುದ್ದೇಗಳ ನೇಮಕಾತಿಯನ್ನು ಸಂಪೂರ್ಣವಾಗಿ ಪೂರೈಸಿಲ್ಲ.

9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಒಬಿಸಿ ಕೋಟಾಗಳನ್ನು ಪೂರೈಸಿವೆ. ಶೇ 50ರಷ್ಟು ಪೂರೈಸಿರುವ ರಾಜ್ಯಗಳಲ್ಲಿ ತಮಿಳುನಾಡು ತನ್ನ ಕೋಟಾ ಪೂರೈಸಿ ಈ ವರ್ಗದಲ್ಲಿ ಎರಡನೇ ಅತಿ ಹೆಚ್ಚು ಶೇಕಡಾವಾರು ಮೀಸಲಾತಿ ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಶೇ.13ರಷ್ಟು ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶೇ.35ರಷ್ಟು ಮಾತ್ರ ಮಹಿಳಾ ನ್ಯಾಯಾಧೀಶರಿದ್ದಾರೆ ಎನ್ನುವ ಅಂಶವನ್ನು ವರದಿ ಬಹಿರಂಗಪಡಿಸಿದೆ.

ಐದು ರಾಜ್ಯಗಳಾದ ಬಿಹಾರ, ತ್ರಿಪುರ, ಉತ್ತರಾಖಂಡ, ಮಣಿಪುರ ಮತ್ತು ಮೇಘಾಲಯದ ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಾಧೀಶರು ಇಲ್ಲ.  

ಮೂಲಸೌಕರ್ಯ

ಆದರ್ಶಯುತವಾಗಿ ಹೇಳುವುದಾದರೆ, ಪ್ರತಿಯೊಬ್ಬ ನ್ಯಾಯಾಧೀಶರಿಗೂ ನ್ಯಾಯಾಲಯದ ಹಾಲ್ ಇರುಬೇಕು ಎಂದು ವರದಿ ಹೇಳುತ್ತದೆ. ಆದರೆ, ಆಗಸ್ಟ್ 2022 ರಲ್ಲಿ, ಆ ಸಮಯದಲ್ಲಿ ಮಂಜೂರಾದ 24,631 ನ್ಯಾಯಾಧೀಶರ ಹುದ್ದೆಗಳ ಹೋಲಿಕೆಯಲ್ಲಿ 21,014 ಕೋರ್ಟ್ ಹಾಲ್‌ಗಳು ಇದ್ದವು, ಇದು ಶೇಕಡಾ 14.7 ರಷ್ಟು ಕೊರತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರತಿ ರಾಜ್ಯವೂ ಪ್ರತಿ ಮಂಜೂರಾತಿ ನ್ಯಾಯಾಧೀಶರನ್ನು ನೇಮಿಸಿದರೆ, ಕೇವಲ 4 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಸಾಕಷ್ಟು ಕೋರ್ಟ್‌ ಹಾಲ್‌ಗಳು ಉಳಿಯುತ್ತವೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಕೊರತೆ ಇರಲಿದೆ.

ರಾಷ್ಟ್ರೀಯವಾಗಿ, ನ್ಯಾಯಾಲಯದ ಸಭಾಂಗಣಗಳ ಸಂಖ್ಯೆಯು ನಿಜವಾದ ನ್ಯಾಯಾಧೀಶರ ಸಂಖ್ಯೆಗೆ ಸಾಕಾಗುತ್ತದೆ. ಆದರೆ, ಮಂಜೂರಾದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿದರೆ ಜಾಗದ ಸಮಸ್ಯೆಯಾಗುತ್ತದೆ.

ಪ್ರಕರಣಗಳ ಬಾಕಿ

ಡಿಸೆಂಬರ್ 2022 ರ ಹೊತ್ತಿಗೆ, ದೇಶದ ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 4.9 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ.

30 ವರ್ಷಗಳಿಂದ 1.9 ಲಕ್ಷ ಪ್ರಕರಣಗಳು ಮತ್ತು 10 ವರ್ಷಗಳಿಂದ 56 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಈ ಪೈಕಿ ಸರಾಸರಿ ಶೇ.49 ಮತ್ತು ಶೇ.29 ಪ್ರಕರಣಗಳು ಕ್ರಮವಾಗಿ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಲ್ಲಿ 5 ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿವೆ. ಇದಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 70,000 ಪ್ರಕರಣಗಳು ಬಾಕಿ ಉಳಿದಿವೆ.

ಹೈಕೋರ್ಟ್ ಮಟ್ಟದಲ್ಲಿ, ಉತ್ತರ ಪ್ರದೇಶ ಅತ್ಯಧಿಕ ಸಂಖ್ಯೆಯಲ್ಲಿ ಸರಾಸರಿ ಪ್ರಕರಣಗಳ ಬಾಕಿ ಉಳಿಸಿಕೊಂಡಿದೆ. ಪ್ರಕರಣಗಳು ಬಾಕಿ ಉಳಿದಿರುವ ಅವಧಿಯು ಸರಾಸರಿ 11.34 ವರ್ಷಗಳಾಗಿವೆ. ತ್ರಿಪುರದಲ್ಲಿ 1 ವರ್ಷ, ಸಿಕ್ಕಿಂನಲ್ಲಿ 1.9 ವರ್ಷಗಳು ಮತ್ತು ಮೇಘಾಲಯದಲ್ಲಿ 2.1 ವರ್ಷಗಳಷ್ಟು ಕಡಿಮೆ ಸರಾಸರಿಯ ಪ್ರಕರಣಗಳು ಹೈಕೋರ್ಟ್‌ಗಳಲ್ಲಿ ಬಾಕಿ ಇವೆ.

ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ, ಕೇರಳ ಮತ್ತು ಪಂಜಾಬ್ ಎರಡೂ ಹಂತಗಳ ನ್ಯಾಯಾಲಯಗಳು ಶೇ 100ರಷ್ಟು ಮತ್ತು ಹೆಚ್ಚಿನ ಪ್ರಕರಣಗಳ ವಿಲೇವಾರಿ ಮಾಡುವ ರಾಜ್ಯಗಳೆನಿಸಿಕೊಂಡಿವೆ.

ಬಜೆಟ್‌

ನ್ಯಾಯಾಂಗದ ಆರ್ಥಿಕ ಬಾಧ್ಯತೆಯ ಸಿಂಹಪಾಲು ರಾಜ್ಯಗಳ ಮೇಲಿದ್ದು ಕೇಂದ್ರ ಸರ್ಕಾರವು ರಾಜ್ಯ ನ್ಯಾಯಾಂಗ ಬಜೆಟ್‌ಗೆ ಕೇವಲ ಶೇ 10ರಷ್ಟು ಕೊಡುಗೆ ನೀಡುತ್ತದೆ.

ದೆಹಲಿ ಮತ್ತು ಚಂಡೀಗಢ  ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ   ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ತನ್ನ ಒಟ್ಟು ವಾರ್ಷಿಕ ವೆಚ್ಚದ ಶೇಕಡಾ 1ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನ್ಯಾಯಾಂಗಕ್ಕೆ ಖರ್ಚು ಮಾಡಿಲ್ಲ.

2022ರಲ್ಲಿ, ನ್ಯಾಯಾಂಗದ ಒಟ್ಟಾರೆ ರಾಷ್ಟ್ರೀಯ ವೆಚ್ಚ ತಲಾವಾರು ಲೆಕ್ಕದಲ್ಲಿ ₹146 ರಷ್ಟಿದೆ, 2015-16 ರಿಂದ ₹42 ಹೆಚ್ಚಳವಾಗಿದೆ.

ಸಿಕ್ಕಿಂ, ಕಳೆದ ವರ್ಷ ₹496 ರ ಹೆಚ್ಚಿನ ತಲಾ ವೆಚ್ಚವನ್ನು ಹೊಂದಿದ್ದು, ಅದನ್ನು ₹139 ರಿಂದ ₹635 ಕ್ಕೆ ಹೆಚ್ಚಿಸಿಕೊಂಡಿದೆ. ₹ 75ರಷ್ಟು ಸರಾಸರಿ ವೆಚ್ಚ ಖರ್ಚು ಮಾಡುವ ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ ಇದು ಎಂಟು ಪಟ್ಟು ಹೆಚ್ಚು.

ನ್ಯಾಯಾಂಗವನ್ನು ಹೊರತುಪಡಿಸಿ ಹುದ್ದೆಗಳ ಖಾಲಿ ಇರುವಿಕೆ ಮೂರು ಸ್ತಂಭಗಳಲ್ಲಿ ಸಮಸ್ಯೆಯಾಗಿತ್ತು.

ಪೊಲೀಸ್‌ ಇಲಾಖೆಯಲ್ಲಿ ಮಹಿಳೆಯರ ಸಂಖ್ಯೆ ಕಳೆದೊಂದು ದಶಕದಿಂದ ದ್ವಿಗುಣಗೊಳ್ಳುತ್ತಿದ್ದರೂ ಅಲ್ಲಿ ಶೇ.11.75ರಷ್ಟು ಮಹಿಳೆಯರು ಇದ್ದಾರೆ. ಶೇ 29 ರಷ್ಟು ಅಧಿಕಾರಿ ಹುದ್ದೆಗಳು ಖಾಲಿ ಇವೆ. ಒಂದು ಲಕ್ಷ ಜನಸಂಖ್ಯೆಗೆ 152.8 ಮಂದಿ ಪೊಲೀಸರಿದ್ದಾರೆ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಇದು 222 ಮಂದಿ ಪೊಲೀಸರಿರಬೇಕು.

ಜೈಲುಗಳು ಸ್ಥಳಾವಕಾಶಕ್ಕಿಂತಲೂ ಹೆಚ್ಚು ಕೈದಿಗಳನ್ನು ಹೊಂದಿದ್ದು, ಶೇ 130ರಷ್ಟು ತುಂಬಿ ತುಳುಕುತ್ತಿವೆ. ಮೂರನೇ ಎರಡರಷ್ಟು ಕೈದಿಗಳು ತನಿಖೆ ಅಥವಾ ವಿಚಾರಣೆ ಪೂರ್ಣಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.

ಬಹುತೇಕ ರಾಜ್ಯಗಳು ಕೇಂದ್ರ ನೀಡಿದ ಹಣವನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಪೋಲೀಸ್, ಕಾರಾಗೃಹಗಳು ಮತ್ತು ನ್ಯಾಯಾಂಗದ ಮೇಲಿನ ವೆಚ್ಚದಲ್ಲಿ ಅವರ ಸ್ವಂತ ಹೆಚ್ಚಳವು ಸರ್ಕಾರದ ವೆಚ್ಚದಲ್ಲಿ ಒಟ್ಟಾರೆ ಹೆಚ್ಚಳಕ್ಕೆ ಅನುಗುಣವಾಗಿಲ್ಲ.

ದೇಶದ ಶೇ 80ರಷ್ಟು ಜನ ಪಡೆಯಲು ಅರ್ಹರಿರುವ ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ಭಾರತದ ತಲಾವಾರು ಖರ್ಚು ವಾರ್ಷಿಕ ₹3.87ರಷ್ಟಿದೆ.