Supreme Court of India
Supreme Court of India 
ಸುದ್ದಿಗಳು

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಹಸಿರು ನಿಶಾನೆ ತೋರಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ತಮಿಳುನಾಡು

Bar & Bench

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತಮಿಳುನಾಡಿನಲ್ಲಿ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ತಾನು ವಿಧಿಸಿದ್ದ ಷರತ್ತುಗಳನ್ನು ತೆಗೆದುಹಾಕಿದ ಮದ್ರಾಸ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠ ಫೆಬ್ರವರಿ 10ರಂದು ಪೊಲೀಸರಿಗೆ ಸೂಚನೆ ನೀಡಿತ್ತು.

'ಆಜಾದಿ ಕಾ ಅಮೃತ್ ಮಹೋತ್ಸವ್‌' ಮತ್ತು ʼಗಾಂಧಿ ಜಯಂತಿʼ ಹಿನ್ನೆಲೆಯಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್‌ ಕೋರಿದ್ದ ಅನುಮತಿಯನ್ನು ಅಕ್ಟೋಬರ್ 2022ರಲ್ಲಿ ತಮಿಳುನಾಡು ಸರ್ಕಾರ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅದೇ ವರ್ಷ ನವೆಂಬರ್ 4 ರಂದು, ಹೈಕೋರ್ಟ್‌ ಏಕಸದಸ್ಯ ಪೀಠ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿತು. ಪಥಸಂಚಲನವನ್ನು ನಿರ್ಬಂಧಿತ ಜಾಗದಲ್ಲಿ ಅಥವಾ ಒಳಾಂಗಣದಲ್ಲಿ ನಡೆಸಬೇಕು ಎಂದು ಅದು ಹೇಳಿತ್ತು.

ಆದರೆ ಈ ಆದೇಶವನ್ನು ಆರ್‌ಎಸ್‌ಎಸ್‌ ಪ್ರಶ್ನಿಸಿತು. ಫೆಬ್ರವರಿ 10ರಂದು ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಸಿ ಸೆಪ್ಟೆಂಬರ್ 22, 2022ರಲ್ಲಿ ನೀಡಿದ್ದ ಆದೇಶವನ್ನೇ ಮತ್ತೆ ಜಾರಿಗೆ ತಂದಿತು. ಈ ಆದೇಶದಲ್ಲಿ ಆರ್‌ಎಸ್‌ಎಸ್‌ ಕೋರಿಕೆಯನ್ನು ಪರಿಗಣಿಸಿ ಅವರು ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಸೂಚಿಸಲಾಗಿತ್ತು.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಸರ್ಕಾರ ಈಗ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.