ಪತ್ನಿಯ ಮೈಬಣ್ಣದ ಬಗ್ಗೆ ಅವಹೇಳನ ಮಾಡುವುದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯವಾಗದು ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸದಾಶಿವ ಪರ್ಬತಿ ರೂಪನವರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಮೂರು ದಶಕಗಳ ಹಿಂದೆ ಅಂದರೆ 1995ರಲ್ಲಿ ಪತಿ ತನ್ನ ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿ ಆಕೆಯ ವಿರುದ್ಧ ಕ್ರೌರ್ಯ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಎಂ ಮೋದಕ್ ಅವರು ಜುಲೈ 11ರಂದು ನೀಡಿದ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಕ್ಷೆ ವಿಧಿಸಲು ಅಗತ್ಯವಾದ ಪುರಾವೆಗಳಿಲ್ಲ ಎಂದ ಹೈಕೋರ್ಟ್ ವ್ಯಕ್ತಿ ದೋಷಿ ಎಂದು ವಿಚಾರಣಾ ನ್ಯಾಯಾಲಯ 1998ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.
ಅಪರಾಧ ಸಾಬೀತುಪಡಿಸಲು ಸಾಕ್ಷ್ಯಗಳು ಸಾಲುವುದಿಲ್ಲ. ದಾಖಲೆಯ ಪ್ರಕಾರ ಪ್ರೇಮಾ ಅವರ ಮೈಬಣ್ಣದ ಕಾರಣಕ್ಕೆ ಅವರನ್ನು ಹೀಯಾಳಿಸಲಾಗಿದ್ದರೂ ಅದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಅಪರಾಧವಾಗುತ್ತದೆ ಎನಿಸುವುದಿಲ್ಲ. ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಶಿಕ್ಷೆ ವಿಧಿಸುವುದು ಕೂಡ ಸಮರ್ಥನೀಯವಲ್ಲ ಏಕೆಂದರೆ ಕಿರುಕುಳದ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಸಿಕ್ಯೂಷನ್‌ಗೆ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ವಿವರಿಸಿದೆ.
ಪತ್ನಿಯ ಕಪ್ಪು ಬಣ್ಣವನ್ನು ಹೀಯಾಳಿಸಲಾಗುತ್ತಿತ್ತು ಮತ್ತು ಸರಿಯಾಗಿ ಅಡುಗೆ ಮಾಡುತ್ತಿಲ್ಲ ಎಂದು ಕಿರುಕುಳ ನೀಡಲಾಗುತ್ತಿತ್ತು ಎಂಬುದಾಗಿ ಪ್ರಕರಣದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದರು.
ಪತಿ ತನಗೆ ವಿಧಿಸಿದ್ದ ಐದು ವರ್ಷ ಸಜೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪತಿಯ ವಾದ ಪುರಸ್ಕರಿಸಿದ ಹೈಕೋರ್ಟ್ ಪ್ರಸ್ತುತ ಪ್ರಕರಣದಲ್ಲಿನ ಮನಸ್ತಾಪಗಳು ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುವಷ್ಟು ದೊಡ್ಡಮಟ್ಟದಲ್ಲಿವೆ ಎಂದು ಹೇಳಲಾಗದು ಎಂಬುದಾಗಿ ನುಡಿಯಿತು.
ಐಪಿಸಿ ಸೆಕ್ಷನ್ 498-ಎ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಉದ್ದೇಶ ದೊಡ್ಡಮಟ್ಟದ್ದಾಗಿರಬೇಕು. ಆದರೆ ಮೂವರು ಸಾಕ್ಷಿಗಳನ್ನು ಪರಿಗಣಿಸಿದ ವಿಚಾರಣಾ ನ್ಯಾಯಾಲಯ ಕಿರುಕುಳ ದೊಡ್ಡಮಟ್ಟದಲ್ಲಿ ನಡೆದಿದೆಯೇ ಎಂಬ ಕುರಿತು ಅವಲೋಕನ ಮಾಡಿಲ್ಲ. ಕಿರುಕುಳ ನಡೆದಿದೆ ಎನ್ನುವುದನ್ನು ಒಪ್ಪಿಕೊಂಡರೂ ಕೂಡ ಅದು ಐಪಿಸಿ ಸೆಕ್ಷನ್ 498-ಎ ಅಡಿ ಬರುವುದಿಲ್ಲ ಎಂದ ನ್ಯಾಯಾಲಯ ತೀರ್ಪನ್ನು ಬದಿಗೆ ಸರಿಸಿತು.
[ತೀರ್ಪಿನ ಪ್ರತಿ]