Teesta Setalvad and Supreme Court 
ಸುದ್ದಿಗಳು

[ತೀಸ್ತಾ ಜಾಮೀನು ಪ್ರಕರಣ] ಇಷ್ಟೇ ದೀರ್ಘ ಅವಧಿಗೆ ಮುಂದೂಡಿರುವ ಜಾಮೀನು ಪ್ರಕರಣಗಳ ಉದಾಹರಣೆ ನೀಡಿ: ಸುಪ್ರೀಂ ತರಾಟೆ

ಇದು ಕೊಲೆ ಅಥವಾ ದೈಹಿಕ ನ್ಯೂನತೆ ಉಂಟು ಮಾಡಿರುವಂತಹ ಪ್ರಕರಣವಲ್ಲ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಒಮ್ಮೆ ಪೊಲೀಸ್‌ ವಶಕ್ಕೆ ಪಡೆದ ನಂತರ ಮತ್ತೆ ವಶಕ್ಕೆ ಪಡೆಯಲು ಪೊಲೀಸರಿಗೆ ಹೆಚ್ಚಿನ ಅಂಶಗಳೇನೂ ಇರುವುದಿಲ್ಲ ಎಂದ ನ್ಯಾಯಾಲಯ.

Bar & Bench

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೀರ್ಘ ಅವಧಿಗೆ ಮುಂದೂಡಿರುವ ರೀತಿಯಲ್ಲಿಯೇ ಗುಜರಾತ್‌ ಹೈಕೋರ್ಟ್‌ ಈ ಹಿಂದೆ ದೀರ್ಘ ಅವಧಿಗೆ ಜಾಮೀನು ವಿಚಾರಣೆಗಳನ್ನು ಮುಂದೂಡಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಗುಜರಾತ್‌ ಸರ್ಕಾರಕ್ಕೆಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ [ತೀಸ್ತಾ ಅತುಲ್‌ ಸೆಟಲ್ವಾಡ್‌ ಹಾಗೂ ಮತ್ತೊಬ್ಬರು ವರ್ಸಸ್‌ ಗುಜರಾತ್‌ ಸರ್ಕಾರ].

ತಮ್ಮ ಜಾಮೀನು ಅರ್ಜಿ ವಿಚಾರಣೆಯನ್ನು ದೀರ್ಘ ಅವಧಿಗೆ ಮುಂದೂಡಿರುವ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ತೀಸ್ತಾ ಅವರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್ ಲಲಿತ್‌ ಮತ್ತು ನ್ಯಾ. ರವೀಂದ್ರ ಭಟ್‌ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ನಡೆಸಿತು. ತೀಸ್ತಾ ಅವರ ಮನವಿ ಸಂಬಂಧ ಆಗಸ್ಟ್ 2ರಂದು ನೋಟಿಸ್‌ ನೀಡಿದ್ದ ಗುಜರಾತ್‌ ಹೈಕೋರ್ಟ್‌ ವಿಚಾರಣೆಯನ್ನು ಅರು ವಾರಗಳ ನಂತರ ಸೆಪ್ಟೆಂಬರ್‌ 19ಕ್ಕೆ ಪಟ್ಟಿ ಮಾಡಿತ್ತು. ಈ ಅದೇಶದ ವಿರುದ್ಧ ವಿಚಾರಣೆ ವೇಳೆ ಪೀಠವು ಕೆಲ ಕಟು ಅವಲೋಕನಗಳನ್ನು ಮಾಡಿತು.

"ಮಹಿಳೆಯೊಬ್ಬರು ಇಂತಹ ಆರೋಪದಲ್ಲಿ ಬಂಧನದಲ್ಲಿರುವ ಪ್ರಕರಣದಲ್ಲಿ ಹೈಕೋರ್ಟ್ ಇಷ್ಟೇ ದೀರ್ಘ ಅವಧಿಗೆ ಜಾಮೀನು ವಿಚಾರಣೆ ಮುಂದೂಡಿರುವ ಒಂದು ಪ್ರಕರಣವನ್ನು ನಮಗೆ ತೋರಿಸಿ. ಇಂತಹ ಜಾಮೀನು ಪ್ರಕರಣಗಳಲ್ಲಿ ಸಾಮಾನ್ಯ ವಿಧಾನವೇನು" ಎಂದು ಪೀಠವು ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.

"ಮಹಿಳಾ ಆರೋಪಿಯೊಬ್ಬರಿಗೆ ಹೈಕೋರ್ಟ್‌ ಹೀಗೆ ದಿನಾಂಕಗಳನ್ನು ನೀಡಿರುವ ಪ್ರಕರಣಗಳ ಉದಾಹರಣೆಯನ್ನು ನಮಗೆ ನೀಡಿ. ಈ ಮಹಿಳೆಯೊಬ್ಬರು ಮಾತ್ರವೇ ಇದಕ್ಕೆ ಅಪವಾದವಾಗಿರಬೇಕು. ಹೇಗೆ ತಾನೆ ನ್ಯಾಯಾಲಯ ಈ ರೀತಿ ದಿನಾಂಕ ನೀಡಲು ಸಾಧ್ಯ?" ಎಂದು ಸಿಜೆಐ ಲಲಿತ್‌ ಅವರು ಆಕ್ಷೇಪಿಸಿದರು.

ಇದಕ್ಕೆ ಉತ್ತರಿಸಿದ ಎಸ್‌ಜಿ ಮೆಹ್ತಾ ಅವರು "ಮಹಿಳೆಯೇ ಇರಲಿ, ಪುರುಷರೇ ಇರಲಿ ದಿನಾಂಕಗಳು ಏಕರೂಪವಾಗಿರುತ್ತವೆ," ಎಂದರು.

ಈ ಸಂದರ್ಭದಲ್ಲಿ ಜಾಮೀನು ನೀಡಲು ಉತ್ಸಾಹ ತೋರಿದ ನ್ಯಾಯಾಲಯವು, "ಇದು ಕೊಲೆ ಅಥವಾ ದೈಹಿಕ ನ್ಯೂನತೆ ಉಂಟು ಮಾಡಿರುವಂತಹ ಪ್ರಕರಣವಲ್ಲ, ಬದಲಿಗೆ ದಾಖಲೆಗಳನ್ನು ನಕಲು ಮಾಡಿರುವುದು ಮುಂತಾದ ಆರೋಪಗಳನ್ನುಳ್ಳ ಪ್ರಕರಣ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಒಮ್ಮೆ ಪೊಲೀಸ್‌ ವಶಕ್ಕೆ ಪಡೆದ ನಂತರ ಮತ್ತೆ ವಶಕ್ಕೆ ಪಡೆಯಲು ಪೊಲೀಸರಿಗೆ ಯಾವುದೇ ಅಂಶಗಳು ಇರುವುದಿಲ್ಲ. ಅಲ್ಲದೆ, ಆಕೆ ಮಹಿಳೆ ಎನ್ನುವುದನ್ನೂ ಗಮನಿಸಬೇಕು. ನಾನು ಜಾಮೀನು ನೀಡಿ ಸೆ.19ಕ್ಕೆ ಪ್ರಕರಣ ಪಟ್ಟಿ ಮಾಡಬಹುದು..." ಎಂದು ಸಿಜೆಐ ಹೇಳಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಸ್‌ಜಿ, "ಇದು ಹತ್ಯೆ ಪ್ರಕರಣಕ್ಕಿಂತಲೂ ಗಂಭೀರವಾದದ್ದು. ನಾನು ಈಗಲೇ ವಾದಿಸಲು ಸಿದ್ಧ," ಎಂದರು.

ಅಂತಿಮವಾಗಿ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಾಳೆ (ಶುಕ್ರವಾರ, ಸೆ.2) ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಿತು.