G Janardhana Reddy and Telangana HCG Janardhana Reddy Facebook
ಸುದ್ದಿಗಳು

ಅಕ್ರಮ ಗಣಿಗಾರಿಕೆ: ಶಾಸಕ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಜಾಮೀನು

ಮೇ 6ರಂದು ವಿಚಾರಣಾ ನ್ಯಾಯಾಲಯ ರೆಡ್ಡಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

Bar & Bench

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಬುಧವಾರ ಅಮಾನತಿನಲ್ಲಿರಿಸಿದೆ.

ಮೇ 6 ರಂದು ವಿಚಾರಣಾ ನ್ಯಾಯಾಲಯವು ಬಿಜೆಪಿಯ ಮಾಜಿ ಸಚಿವ ರೆಡ್ಡಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ಬೆನ್ನಿಗೇ ರೆಡ್ಡಿ ಅವರನ್ನು ಮೇ 6ರಿಂದ ಅನ್ವಯವಾಗುವಂತೆ ಕರ್ನಾಟಕ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. ಇದೀಗ ತಡೆಯಾಜ್ಞೆ ದೊರೆತಿರುವುದರಿಂದ ಅವರು ತಮ್ಮ ಸ್ಥಾನ  ಉಳಿಸಿಕೊಳ್ಳಬಹುದಾಗಿದೆ.

ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಲಕ್ಷ್ಮಣ್ ಅವರು ರೆಡ್ಡಿ ಈಗಾಗಲೇ ತಮ್ಮ ಶಿಕ್ಷೆಯ ಶೇ 50 ರಷ್ಟನ್ನು ಅನುಭವಿಸಿದ್ದಾರೆ ಎಂದರು. ಅಲ್ಲದೆ ಅವರ ಶಿಕ್ಷೆ ಅಮಾನತುಗೊಳಿಸದೆ ಇದ್ದರೆ ಭಾರತೀಯ ಚುನಾವಣಾ ಆಯೋಗ ಉಪಚುನಾವಣೆಗೆ ಅಧಿಸೂಚನೆ ಹೊರಡಿಸುತ್ತದೆ ಎಂಬುದನ್ನು ಕೂಡ ನ್ಯಾಯಾಲಯ ಗಳಿಸಿತು.

ಮೇಲ್ನೋಟಕ್ಕೆ ಶಿಕ್ಷೆ ಅಮಾನತುಗೊಳಿಸದೆ ಹೊದರೆ ಹಾಲಿ ಶಾಸಕರಾಗಿರುವ, ಜನರ ವಿಶ್ವಾಸ ಗಳಿಸಿರುವ ಅರ್ಜಿದಾರ ತನ್ನ ಕ್ಷೇತ್ರದ ಜನರನ್ನು ಪ್ರತಿನಿಧಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಹೀಗಾಗಿ ತಾನು ವಿಶೇಷ ನ್ಯಾಯಾಲಯದ ಆದೇಶ ಅಮಾನತುಗೊಳಿಸಲು ಒಲವು ತೋರುತ್ತಿರುವುದಾಗಿ ಅದು ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 2011 ರಿಂದ ಜನವರಿ 2015 ರವರೆಗೆ ರೆಡ್ಡಿ ಅವರು ಜೈಲುವಾಸ ಅನುಭವಿಸಿದ್ದರು. ಸಿಬಿಐ ಪ್ರಕರಣಗಳ ಪ್ರಧಾನ ವಿಶೇಷ ನ್ಯಾಯಾಧೀಶರು ಅವರನ್ನು ದೋಷಿ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮೇ 06 ರಂದು ಅವರನ್ನು ಮತ್ತೆ ಬಂಧಿಸಲಾಗಿತ್ತು.

ಈ ಮಧ್ಯೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ವಿ ಡಿ ರಾಜಗೋಪಾಲ್, ಕೆ. ಮೆಹಫೂಜ್ ಅಲಿ ಖಾನ್ ಮತ್ತು ಬಿ.ವಿ ಶ್ರೀನಿವಾಸ ರೆಡ್ಡಿ ಅವರಿಗೆ ಕೂಡ ನ್ಯಾಯಾಲಯ ಇಂದು ಜಾಮೀನು ನೀಡಿದೆ. ಓಬಳಾಪುರಂ ಮೈನಿಂಗ್ ಕಂಪನಿ  ವಿರುದ್ಧದ ಶಿಕ್ಷೆಯ ಆದೇಶವನ್ನೂ ತಡೆಹಿಡಿಯಲಾಗಿದೆ.

ಪ್ರಕರಣದಲ್ಲಿ ಹಿರಿಯ ವಕೀಲರಾದ ಎಸ್ ನಾಗಮುತ್ತು, ಬಿ ನಳಿನ್ ಕುಮಾರ್ , ಪಿ ಬಿ ಸುರೇಶ್, ವಕೀಲರಾದ ಮಾಯಾಂಕ್ ಜೈನ್ ಹಾಗೂ ವಿಮಲ್ ವರ್ಮಾ ವಾಸಿರೆಡ್ಡಿ ಅವರು ವಾದ ಮಂಡಿಸಿದರು. ಸಿಬಿಐಯನ್ನು ವಿಶೇಷ ಸರ್ಕಾರಿ ಅಭಿಯೋಜಕ ಶ್ರೀನಿವಾಸ್ ಕಪಾಟಿಯಾ ಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿ]

Gali_Janardhana_Reddy_v_The_State_of_Telangana.pdf
Preview