ಸಾರ್ವಜನಿಕರು ಓಡಾಡುವ ರಸ್ತೆಯ ಮೇಲೆ ನಿರ್ಮಿಸಲಾಗಿದ್ದ ಗಣೇಶ ದೇವಸ್ಥಾನದ ಭೂಮಿಯ ಮಾಲೀಕತ್ವವನ್ನು ತಮ್ಮದಾಗಿ ಘೋಷಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ದೇವಸ್ಥಾನದ ಅರ್ಚಕರ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ. ಅರ್ಚಕರು ಅಂತಹ ಭೂಮಿಯ ಮಾಲೀಕರಲ್ಲ ಬದಲಿಗೆ ಅವರು ದೇವರ ಸೇವಕರಷ್ಟೇ ಎಂದು ಅದು ತೀರ್ಪು ನೀಡಿದೆ [ರಮೇಶ್‌ಭಾಯಿ ಉಮಕಾಂತ್ ಶರ್ಮಾ ಮತ್ತು ಆಶಾಬೆನ್ ಕಮ್ಲೇಶ್‌ಕುಮಾರ್ ಮೋದಿ ಇನ್ನಿತರರ ನಡುವಣ ಪ್ರಕರಣ].
ಸಾರ್ವಜನಿಕ ರಸ್ತೆಯ ಮೇಲೆ ನಿರ್ಮಿಸಲಾಗಿದ್ದ ದೇವಾಲಯ ತೆರವು ಕ್ರಮ ಸಮರ್ಥಿಸಿದ ನ್ಯಾಯಮೂರ್ತಿ ಜೆ ಸಿ ದೋಶಿ ಅವರಿದ್ದ ಪೀಠ, ಅರ್ಚಕರು ದೀರ್ಘಕಾಲ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದ ಮಾತ್ರಕ್ಕೆ ಆ ಭೂಮಿಯ ಕಾನೂನುಬದ್ಧ ಮಾಲೀಕರು ಅವರಾಗುವುದಿಲ್ಲ ಎಂದಿದೆ.
ಅಂತೆಯೇ ಮೇಲ್ಮನವಿ ತಿರಸ್ಕರಿಸಿದ ಅದು ಅರ್ಚಕರ ಪಾತ್ರ ಸೀಮಿತವಾದುದು ಎಂದು ಸ್ಪಷ್ಟಪಡಿಸಿತು. “ಅರ್ಚಕ ಭೂಮಾಲೀಕನಲ್ಲ. ಬದಲಿಗೆ ಕೇವಲ ದೇವರ ಸೇವಕ. ತನ್ನ ಸ್ವಾಮಿಯ ಪರವಾಗಿ ಆಸ್ತಿ ಸ್ವಾಧೀನಪಡಿಸಿಕೊಳ್ಳುವೆ ಎಂದು ಹೇಳಿಕೊಂಡು ಪ್ರತಿಕೂಲ ಸ್ವಾಧೀನದ ತತ್ವದ ಆಧಾರದಲ್ಲಿ ತಾನು ಮಾಲೀಕನೆಂದು ದಾವೆ ಹೂಡಲು ಆತನಿಗೆ ಯಾವುದೇ ಹಕ್ಕಿಲ್ಲ” ಎಂದು ಅದು ವಿವರಿಸಿದೆ.
ಭೂಮಿಯ ಮಾಲೀಕರು ತಮ್ಮ ಆಸ್ತಿಯ ಪಕ್ಕದ ಸಾರ್ವಜನಿಕ ರಸ್ತೆಯ ಮೇಲೆ ದೇವಸ್ಥಾನ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದನ್ನು ತೆರವುಗೊಳಿಸುವಂತೆ ಸಿವಿಲ್ ನ್ಯಾಯಾಲಯವನ್ನು ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯ ಹಾಗೂ ಮೊದಲನೇ ಮೇಲ್ಮನವಿ ನ್ಯಾಯಾಲಯಗಳೆರಡೂ ದೇವಸ್ಥಾನ ತೆರವಿಗೆ ಆದೇಶಿಸಿದ್ದವು. ಇದನ್ನು ಅರ್ಚಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಆದರೆ ಅರ್ಚಕರು ದೀರ್ಘಕಾಲ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದ ಮಾತ್ರಕ್ಕೆ ಆ ಭೂಮಿಯ ಕಾನೂನುಬದ್ಧ ಮಾಲೀಕರು ಅವರಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಧಾರ್ಮಿಕ ಸೇವೆ ಭೂಮಿಯ ಮಾಲೀಕತ್ವಕ್ಕೆ ಆಧಾರವಾಗುವುದಿಲ್ಲ ಎಂದು ಅದು ತಿಳಿಸಿದೆ.
ಪೂಜಾರಿ ಕೇವಲ ನೇಮಕಗೊಂಡವರಾಗಿದ್ದು ಅವರಿಗೆ ಸ್ವತಂತ್ರ ಹಕ್ಕಿರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಪ್ರತಿಕೂಲ ಸ್ವಾಧಿನತೆಯನ್ನು ಸಾಬೀತುಪಡಿಸುವುದಕ್ಕಾಗಿ ನಿಜವಾದ ಮಾಲೀಕರಿಗೆ ವಿರುದ್ಧವಾಗಿ ನಿರಂತರವಾಗಿ ಹಾಗೂ ವಿರೋಧಾತ್ಮಕವಾಗಿ ಶಾಸನಾತ್ಮಕವಾಗಿ ನಿಗದಿಪಡಿಸಿರುವ ಕಾಲಾವಧಿಯವರೆಗೆ ಭೂಮಿಯನ್ನು ಅತಿಕ್ರಮಿಸಿರಬೇಕಾಗುತ್ತದೆ. ಪ್ರಸಕ್ತ ಪ್ರಕರಣದಲ್ಲಿ ಅರ್ಚಕರು ಬೇರೆಯವರ ಸಮ್ಮತಿಯಂತೆ ಪೂಜೆ ಸಲ್ಲಿಸುತ್ತಿರುವುದಾಗಿ ಖುದ್ದು ಒಪ್ಪಿಕೊಂಡಿರುವುದರಿಂದ ಅವರ ಭೂಸ್ವಾಧೀನತೆ ಸಮರ್ಥನೀಯವಲ್ಲ ಎಂದು ಅದು ನುಡಿಯಿತು.
ಇದೇ ವೇಳೆ, ದೇವಸ್ಥಾನದ ಟ್ರಸ್ಟಿಗಳು ಅಥವಾ ದೇವರ ಪರವಾಗಿ ಯಾರೂ ಭೂಮಿಯ ಮಾಲೀಕತ್ವವನ್ನು ಪ್ರಶ್ನಿಸಿಲ್ಲ ಎಂಬುದನ್ನೂ ಹೈಕೋರ್ಟ್ ಉಲ್ಲೇಖಿಸಿತು. ಇಂತಹ ಸಂದರ್ಭದಲ್ಲಿ ಅರ್ಚಕರು ದೇವರ ಅಥವಾ ದೇವಸ್ಥಾನದ ಪರವಾಗಿ ಸ್ವತಂತ್ರವಾಗಿ ಹಕ್ಕು ಪಡೆಯಲಾಗದು ಎಂದು ಅದು ಹೇಳಿತು.
ಸಾರ್ವಜನಿಕ ಆಸ್ತಿಯ ಮೇಲೆ ಅನಧಿಕೃತವಾಗಿ ಧಾರ್ಮಿಕ ಕಟ್ಟಡ ನಿರ್ಮಾಣವಾಗಿದ್ದರೆ ಅವುಗಳ ಮಾಲೀಕತ್ವದ ಹಕ್ಕು ಊರ್ಜಿತವಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇಂತಹ ಕಟ್ಟಡಗಳು ಸಾರ್ವಜನಿಕರ ಹಾಗೂ ಭೂಮಾಲೀಕರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ, ಇಂತಹ ಅತಿಕ್ರಮಣಗಳನ್ನು ರಕ್ಷಿಸುವುದಕ್ಕಾಗಿ ಕಾನೂನು ತತ್ವಗಳನ್ನು ದುರುಪಯೋಗ ಆಗುವುದನ್ನು ತಡೆಗಟ್ಟಲು ನ್ಯಾಯಾಲಯಗಳು ಕಠಿಣವಾಗಿ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿತು.