

ಚೆನ್ನೈನ ಮನೆಯೊಂದರಲ್ಲಿ ಪೂಜಿಸಲಾಗುತ್ತಿದ್ದ ಹಿಂದೂ ದೇವರ ಮೂರ್ತಿಗೂ ಆ ಪ್ರದೇಶದಲ್ಲಿ ಉಂಟಾದ ಅಸ್ವಾಭಾವಿಕ ಸಾವಿಗೂ ನಂಟು ಇದೆ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮೂರ್ತಿ ತೆರವುಗೊಳಿಸಿದ್ದ ಪ್ರಕರಣವನ್ನು ಈಚೆಗೆ ಆಲಿಸಿದ ಮದ್ರಾಸ್ ಹೈಕೋರ್ಟ್ ಮೂಢನಂಬಿಕೆ ಅಥವಾ ವೈಜ್ಞಾನಿಕತೆಯಿಲ್ಲದ ಸಾರ್ವಜನಿಕರ ಭೀತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುವಂತಿಲ್ಲ ಎಂದಿದೆ [ಎ ಕಾರ್ತಿಕ್ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].
ಮೂರ್ತಿಗಳನ್ನು ಶಾಂತವಾಗಿ ಖಾಸಗಿಯಾಗಿ ಪೂಜಿಸುತ್ತಿದ್ದರೆ ಅದಕ್ಕೆ ಇತರರು ಅಡ್ಡಿಪಡಿಸಲು ಸಾಧ್ಯವಿಲ್ಲ. ಅಂತೆಯೇ ಇಂತಹ ಕೃತ್ಯಗಳ ವಿರುದ್ಧ ಇರುವ ಸಾರ್ವಜನಿಕರ ಮೌಢ್ಯಕ್ಕೆ ಸರ್ಕಾರ ತಲೆಬಾಗುವಂತಿಲ್ಲ ಎಂದು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ತಿಳಿಸಿದರು.
“ಒಬ್ಬ ವ್ಯಕ್ತಿ ತನ್ನ ಸ್ವಂತ ಆವರಣದಲ್ಲಿ ಯಾವುದೇ ಮೂರ್ತಿಯನ್ನು ಇಟ್ಟುಕೊಂಡು ಸ್ವತಃ ಶಾಂತವಾಗಿ ಪೂಜೆ ಮಾಡಲು ಅಥವಾ ಇಚ್ಛೆಯಿರುವ ಸ್ನೇಹಿತರು ಅಥವಾ ನೆರೆಹೊರೆಯವರನ್ನು ಆಹ್ವಾನಿಸಿ ಪೂಜೆ ಮಾಡಲು ಬಯಸಿದರೆ, ಬಹುಸಂಖ್ಯಾತರ ಬಲದ ಆಧಾರದಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಇಂತಹ ಮೂಢನಂಬಿಕೆಗಳು ಮತ್ತು ಅಂಧಶ್ರದ್ಧೆಗಳಿಗೆ ಸರ್ಕಾರಿ ಅಧಿಕಾರಿಗಳು ಶರಣಾಗಬಾರದು. ದೇವರು ಅಥವಾ ಮೂರ್ತಿ ಯಾವುದೇ ಮಾನವನಿಗೆ ಹಾನಿ ಮಾಡುವುದಿಲ್ಲ. ಇದು ಕೇವಲ ಮೂಢನಂಬಿಕೆಯಾಗಿದ್ದು ಇವು ‘ಭಕ್ತಿ’ಅಥವಾ ‘ವಿಜ್ಞಾನ’ ತತ್ವಗಳಿಗೆ ಹೊಂದಿಕೆಯಾಗಿವೆ ಎಂದು ಹೇಳಲಾಗದು” ಎಂಬುದಾಗಿ ನ್ಯಾಯಾಲಯ ಕೆಲ ದಿನಗಳ ಹಿಂದೆ ನೀಡಿದ ಆದೇಶದಲ್ಲಿ ತಿಳಿಸಿದೆ.
ಉತ್ತರ ಚೆನ್ನೈನಲ್ಲಿರುವ ಖಾಸಗಿ ನಿವಾಸವೊಂದರಲ್ಲಿ ಎ ಕಾರ್ತಿಕ್ ಎಂಬವರು ಹಿಂದೂ ದೇವತೆ ಶಿವಶಕ್ತಿ ದಕ್ಷೀಶ್ವರಿ, ಜೊತೆಗೆ ವಿನಾಯಗನ್ (ಗಣೇಶ) ಹಾಗೂ ವೀರಭದ್ರನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಕಾರ್ತಿಕ್ ಅವರ ಪೂಜೆ ಮುಖ್ಯವಾಗಿ ಖಾಸಗಿ ಸ್ವರೂಪದ್ದಾಗಿದ್ದರೂ, ನೆರೆಹೊರೆಯವರು ಮತ್ತು ಇಚ್ಛೆಯಿದ್ದ ಭಕ್ತರಿಗೆ ಪೂಜೆಯಲ್ಲಿ ಭಾಗವಹಿಸಲು ಅವಕಾಶ ಇತ್ತು. ಆದರೆ ಈ ಪ್ರದೇಶದಲ್ಲಿ ಸಂಭವಿಸಿದ ಸರಣಿ ಅಸ್ವಾಭಾವಿಕ ಸಾವುಗಳಿಗೂ ಪೂಜೆಗೂ ಸಂಬಂಧವಿದೆ ಎಂದು ಸ್ಥಳೀಯರು ದೂರಿದ್ದರಿಂದ ಅಧಿಕಾರಿಗಳು ಮೂರ್ತಿಗಳನ್ನು ತೆರವುಗೊಳಿಸಿದ್ದರು.
ಆದರೆ ಈ ಕಾರಣವನ್ನು 2025ರ ಏಪ್ರಿಲ್ 3ರಂದು ಸಂಪೂರ್ಣ ತಿರಸ್ಕರಿಸಿದ್ದ ಹೈಕೋರ್ಟ್, ಅಧಿಕಾರಿಗಳ ಕ್ರಮ ‘ಭಕ್ತಿʼ ಅಥವಾ ‘ವಿಜ್ಞಾನʼ ತತ್ವಗಳಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಲಾಗದು. ಜೊತೆಗೆ, ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ರಾಜ್ಯದ ಸಂವಿಧಾನಾತ್ಮಕ ಕರ್ತವ್ಯ ಎಂದಿತ್ತು.
ಆದ್ದರಿಂದ, ಮೂರ್ತಿಗಳ ಪೂಜೆಯಲ್ಲಿ ಧ್ವನಿವರ್ಧಕಗಳ ಬಳಕೆ, ಶಬ್ದ ಮಾಲಿನ್ಯ, ನೆರೆಹೊರೆಯವರಿಗೆ ಅಡಚಣೆ, ಅಥವಾ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವಂತಹ ಕಾರ್ಯಗಳು ಇರಬಾರದು ಎಂಬ ಷರತ್ತುಗಳನ್ನು ಅರ್ಜಿದಾರರಿಗೆ ವಿಧಿಸಿದ ನ್ಯಾಯಾಲಯ ಮೂರ್ತಿಗಳನ್ನು ಅರ್ಜಿದಾರರಿಗೆ ಮರಳಿಸುವಂತೆ ಸೂಚಿಸಿತ್ತು. ಆದರೆ ಆದೇಶ ಪಾಲನೆಯಾಗಿಲ್ಲ ಎಂದು ಬಳಿಕ ಕಾರ್ತಿಕ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಮೂರ್ತಿಗಳನ್ನು ಮರಳಿ ಪ್ರತಿಷ್ಠಾಪಿಸಿದರೆ ಸ್ಥಳೀಯರು ಹಿಂಸಾಚಾರ ನಡೆಸುವುದಾಗಿ ಹಾಗೂ ಆಸ್ತಿ ನಾಶ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಪೊಲೀಸ್ ರಕ್ಷಣೆಯ ಅಗತ್ಯವಿದೆ ಎಂದು ಕಾರ್ತಿಕ್ ಪರ ವಕೀಲರು ವಾದಿಸಿದರು.
ಆದರೆ ಮನೆ ನಿರ್ಮಿಸಲಷ್ಟೇ ಕಾರ್ತಿಕ್ ಅವರಿಗೆ ಅನುಮತಿ ನೀಡಲಾಗಿತ್ತು. ಮನೆಯನ್ನು ಅವರು ದೇವಾಲಯವಾಗಿ ಪರಿವರ್ತಿಸಿದ್ದಾರೆ ಎಂದು ಸರ್ಕಾರ ವಾದಿಸಿತು. ಮಧ್ಯರಾತ್ರಿ ಸೇರಿದಂತೆ ಅಪವೇಳೆಯಲ್ಲಿ ಪೂಜೆ ಸಲ್ಲಿಸಲಾಗುತ್ತಿದ್ದು ಇದರಿಂದ ಆ ಪ್ರದೇಶದಲ್ಲಿ ಶಾಂತಿಭಂಗವಾಗಿದೆ ಎಂದು ಸರ್ಕಾರ ಹೇಳಿತು.
ಆದರೆ ನ್ಯಾಯಾಲಯದ ಸೂಚನೆಯಂತೆ ಮೂರ್ತಿಗಳನ್ನು ಅರ್ಜಿದಾರರಿಗೆ ಹಸ್ತಾಂತರಿಸಲಾಯಿತು. ಅಧಿಕಾರಿಗಳು ಆರೋಪಿಸಿರುವಂತೆ ಅರ್ಜಿದಾರರ ಆವರಣದಲ್ಲಿ ಯಾವುದೇ ಅನಧಿಕೃತ ನಿರ್ಮಿತಿಗಳು ಇದ್ದಲ್ಲಿ ಅದರ ಬಗ್ಗೆ ಪ್ರತ್ಯೇಕವಾಗಿ ಕಾನೂನು ಕ್ರಮ ಕೈಗೊಳ್ಳಬಹುದು ಎಂದಿತು.
ಖಾಸಗಿ ಆವರಣದಲ್ಲಿ ಅರ್ಜಿದಾರರು ಏರ್ಪಡಿಸುವ ಪೂಜೆ ಸಾರ್ವಜನಿಕರಿಗೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಇರಬಾರದು ಎಂತಲೂ ನ್ಯಾಯಾಲಯ ಇದೇ ವೇಳೆ ತಿಳಿಸಿತು.