ದೇಶದ ಜೈಲಗಳಲ್ಲಿನ ಜಾತಿ ತಾರತಮ್ಯ ಕೊನೆಗಾಣಿಸುವುದಕ್ಕೆ ಮತ್ತು ಜೈಲು ಕೈಪಿಡಿಗಳಲ್ಲಿ ಜಾತಿ ಆಧಾರಿತವಾಗಿ ಜೈಲ ಬ್ಯಾರಕ್‌ಗಳಲ್ಲಿ ಕೈದಿಗಳನ್ನು ವಿಭಜಿಸುವ ಪದ್ದತಿಯನ್ನು ತೊಡೆದು ಹಾಕುವಂತೆ ಕಳೆದ ಗುರುವಾರ ಸುಪ್ರೀಂ ಕೋರ್ಟ್ ಸ್ಪಷ್ಟ ಸಂದೇಶವೊಂದನ್ನು ನೀಡಿತು. (ಸುಕನ್ಯಾ ಶಾಂತಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).
ದೇಶದ ಯಾವುದೇ ಜೈಲುಗಳಲ್ಲಿ ಜಾತಿ ತಾರತಮ್ಯ ಎಸಗುವುದನ್ನು ಸಹಿಸಲಾಗದು ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಎಚ್ಚರಿಕೆ ನೀಡಿತು. ಅಂತೆಯೇ ಸಮಸ್ಯೆ ಮೇಲ್ವಿಚಾರಣೆಗಾಗಿ ಸ್ವಯಂ ಪ್ರೇರಿತವಾಗಿ ಮೊಕದ್ದಮೆಯನ್ನೂ ಅದು ದಾಖಲಿಸಿಕೊಂಡಿದೆ. ಜೈಲುಗಳಲ್ಲಿ ಜಾತಿ ತಾರತಮ್ಯ ಕಂಡುಬಂದರೆ ರಾಜ್ಯ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅದು ಇದೇ ವೇಳೆ ಎಚ್ಚರಿಕೆ ನೀಡಿದೆ.
ತೀರ್ಪಿನ ಹತ್ತು ಪ್ರಮುಖ ಅವಲೋಕನಗಳು ಇಲ್ಲಿವೆ:
1. ಕ್ರಿಮಿನಲ್ ಕಾನೂನುಗಳು ವಸಾಹತುಶಾಹಿ ಅಥವಾ ಪೂರ್ವ ವಸಾಹತುಶಾಹಿ ಸಿದ್ಧಾಂತವನ್ನು ಅನುಮೋದಿಸಬಾರದು
ಆಧುನಿಕ ಕಾಲದಲ್ಲಿ ಕ್ರಿಮಿನಲ್ ಕಾನೂನುಗಳು 'ರಾಜ್ಯದ ಶಕ್ತಿಯ ಪ್ರಬಲ ಅಭಿವ್ಯಕ್ತಿ' ಆಗಿರುವುದರಿಂದ ಕಾನೂನಿನೆದರು ಎಲ್ಲರೂ ಸಮಾನರು ಎಂಬುದನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವಸಾಹತುಶಾಹಿ ಯುಗದಲ್ಲಿ, ಬ್ರಿಟಿಷರು ಭಾರತದ ಜೈಲುಗಳಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಯತ್ನಿಸಲಿಲ್ಲ. ಆದರೆ ಈ ವಿಧಾನ ಇಂದಿಗೂ ಮುಂದುವರೆಯಲು ಅನುಮತಿ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
2. ಡಿನೋಟಿಫೈಡ್ ಬುಡಕಟ್ಟುಗಳ ವಿರುದ್ಧದ ತಾರತಮ್ಯ ಕೊನೆಗೊಳ್ಳಬೇಕು
ಬ್ರಿಟಿಷ್ ವಸಾಹತುಶಾಹಿ ಆಡಳಿತವು ರೂಢಿಗತ ಊಹೆಗಳ ಆಧಾರದ ಮೇಲೆ ಕೆಲವು ತುಳಿತಕ್ಕೊಳಗಾದ ಗುಂಪುಗಳನ್ನು (ಅಲೆಮಾರಿ ಬುಡಕಟ್ಟು ಸಮುದಾಯಗಳು) 'ಅಪರಾಧಿ ಬುಡಕಟ್ಟುಗಳು' ಎಂದು ವರ್ಗೀಕರಿಸುವ ಕಾನೂನುಗಳನ್ನು ಜಾರಿಗೆ ತಂದಿತ್ತು ಎಂದು ನ್ಯಾಯಾಲಯ ನೆನಪಿಸಿತು.
ಇದಲ್ಲದೆ ಡಿನೋಟಿಫೈಡ್ ಬುಡಕಟ್ಟುಗಳ ಸದಸ್ಯರನ್ನು (ವಸಾಹತುಶಾಹಿ ಕಾಲಘಟ್ಟದಲ್ಲಿ ಅಪರಾಧಿ ಬುಡಕಟ್ಟುಗಳು ಎಂದು ಕರೆದು ಹೊರಡಿಸಿದ್ದ ಅಧಿಸೂಚನೆಯ ವ್ಯಾಪ್ತಿಯೊಳಗಿದ್ದ ಬುಡಕಟ್ಟುಗಳು) ರೂಢಿಗತ ಅಪರಾಧಿ ಗುಂಪುಗಳ ಸದಸ್ಯರಂತೆ ಕಾಣಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂತಹ ತಾರತಮ್ಯ ಇರುವ ಜೈಲು ಕೈಪಿಡಿಗಳು ದೋಷಯುಕ್ತವಾಗಿವೆ ಎಂದ ಅದು ಈ ತಾರತಮ್ಯ ಮುಂದುವರೆಯುವಂತಿಲ್ಲ ಎಂದಿದೆ.
3. ತಾರತಮ್ಯಕ್ಕೆ ಜಾತಿ ಆಧಾರವಾಗಬಾರದು
"ಕೆಲವು ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಜಾತಿ-ಆಧಾರಿತ ವರ್ಗೀಕರಣಗಳನ್ನು ಅನುಮತಿಸಲಾಗಿದ್ದರೂ, ಅವು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಉದ್ದೇಶ ಪೂರೈಸುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿತವಾಗಿರುತ್ತವೆ... ನಿರ್ದಿಷ್ಟವಾಗಿ ಅಥವಾ ಪರೋಕ್ಷವಾಗಿ ಜಾತಿಯ ಆಧಾರದ ಮೇಲೆ ಕೈದಿಗಳ ನಡುವೆ ತಾರತಮ್ಯ ಉಂಟುಮಾಡುವ ನಿಯಮಗಳು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತವೆ" ಎಂದು ನ್ಯಾಯಾಲಯ ಹೇಳಿದೆ.
ಕೈದಿಗಳನ್ನು ಜಾತಿಯ ಆಧಾರದ ಮೇಲೆ ವರ್ಗೀಕರಿಸುವುದಕ್ಕೂ ಭದ್ರತೆ ಅಥವಾ ಸುಧಾರಣೆಯ ಉದ್ದೇಶಗಳನ್ನು ಭದ್ರಪಡಿಸುವ ನಡುವೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ಹೇಳಿದೆ.
4. ಜಾತಿ ಗುಂಪುಗಳ ನಡುವಿನ ಪೈಪೋಟಿ ಪ್ರತ್ಯೇಕತೆಗೆ ಕಾರಣವಾಗಬಾರದು
ಅಧಿಕಾರಿಗಳು ಎರಡು ಪ್ರತಿಸ್ಪರ್ಧಿ ಜಾತಿ ಗುಂಪುಗಳು ಪರಸ್ಪರ ಘರ್ಷಣೆಗೆ ಒಳಗಾಗಬಹುದು ಎಂಬ ಆತಂಕದ ಮೇಲೆ ಅವರ ಜಾತಿಗಳ ಆಧಾರದಲ್ಲಿ ಅವರನ್ನು ತಮಿಳುನಾಡಿನ ಜೈಲು ಅಧಿಕಾರಿಗಳು ಪ್ರತ್ಯೇಕಿಸಿ ಇರಿಸಿದ್ದರು. ಆದರ ಹಾಗೆ ಪ್ರತ್ಯೇಕತೆ ಕೂಡದು ಬದಲಿಗೆ ಜೈಲಿನೊಳಗೆ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಅದು ಎಚ್ಚರಿಕೆ ನೀಡಿದೆ.
5. ಸಂವಿಧಾನದ 21ನೇ ವಿಧಿಯಡಿ ಜಾತಿ ಅಡೆತಡೆಗಳನ್ನು ಮೀರುವ ಹಕ್ಕು
ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಜಾತಿ ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಹಕ್ಕನ್ನು ಸಹ ಒಳಗೊಂಡಿವೆ ಎಂದಿರುವ ಸುಪ್ರೀಂ ಕೋರ್ಟ್ ಜೈಲು ಕೈಪಿಡಿಗಳು ಸಮಾಜದಂಚಿನಲ್ಲಿರುವ ಸಮುದಾಯಗಳ ಕೈದಿಗಳ ಸುಧಾರಣೆಯನ್ನು ನಿರ್ಬಂಧಿಸಿದರೆ ಆಗ ಅವು ಕೈದಿಗಳ ಬದುಕುವ ಹಕ್ಕನ್ನು ಉಲ್ಲಂಘಿಸುತ್ತವೆ” ಎಂದು ತೀರ್ಪು ಹೇಳಿದೆ.
6. ತುಳಿತಕ್ಕೊಳಗಾದ ಜಾತಿಗಳಿಗೆಂದೇ ಕೀಳು ಕೆಲಸ ವಹಿಸುವಂತಿಲ್ಲ.
ವ್ಯಕ್ತಿಗಳ ಜಾತಿ ಹಿನ್ನೆಲೆ ಉಲ್ಲೇಖಿಸಿ ಅವರು ಕೀಳು ಅಥವಾ ಅಪಮಾನಕರ ಕೆಲಸ ಮಾಡುವಂತೆ ಮಾಡುವುದು ಬಲವಂತದ ದುಡಿಮೆ ಮಾಡುವಂತೆ ಹೇಳಿದಂತಾಗುವುದರಿಂದ ಅದಕ್ಕೆ ಅನುಮತಿ ಇರದು ಎಂದು ನ್ಯಾಯಾಲಯ ಹೇಳಿದೆ.
7. ಜಾತಿ ತಾರತಮ್ಯ ನಿವಾರಣೆಗೆ ಬಹುಮುಖಿ ವಿಧಾನದ ಅಗತ್ಯವಿದೆ
" ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಡಿನೋಟಿಫೈಡ್ ಬುಡಕಟ್ಟುಗಳ ವಿರುದ್ಧದ ತಾರತಮ್ಯ ವ್ಯವಸ್ಥಿತ ರೀತಿಯಲ್ಲಿ ಮುಂದುವರೆದಿದೆ. ವ್ಯವಸ್ಥಿತ ತಾರತಮ್ಯವನ್ನು ನಿವಾರಿಸಲು ಎಲ್ಲಾ ಸಂಸ್ಥೆಗಳಿಂದ ದೃಢ ಬಹುಮುಖಿ ಪ್ರಯತ್ನ ಅಗತ್ಯವಿದೆ" ಎಂದು ನ್ಯಾಯಾಲಯ ಹೇಳಿದೆ.
8. ಯಾವುದೇ ಸಮುದಾಯವನ್ನು ಕೀಳು ಉದ್ಯೋಗ ಮಾಡುವ ವರ್ಗ ಎಂದು ಕರೆಯುವಂತಿಲ್ಲ
‘ಸ್ಕ್ಯಾವೆಂಜರ್ ವರ್ಗ’ (ಮಲ ಹೊರುವವರ ವರ್ಗ) ಎಂಬ ಉಲ್ಲೇಖವು ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ಗುಂಪು ಮಲ ಹೊರುವ ಅಥವಾ ಕೀಳು ಕೆಲಸ ಮಾಡುವ ಗುಂಪಾಗಿ ಜನಿಸಿರುವುದಿಲ್ಲ. ಜನ್ಮ ಆಧಾರಿತ ಶುದ್ಧ- ಅಶುದ್ಧತೆಯ ಪರಿಕಲ್ಪನೆ ಮೂಲಕ ಕೀಳು ಉದ್ಯೋಗಗಳನ್ನು ಮಾಡುವಂತೆ ಅವರನ್ನು ಒತ್ತಾಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
9. ಜಾತಿ ತಾರತಮ್ಯ ತಡೆಯಲು ನಿರಾಕರಿಸಿದರೆ ತರತಮದ ಆಚರಣೆಗಳನ್ನು ಭದ್ರಪಡಿಸುತ್ತದೆ
“ ಜಾತಿ ಆಚರಣೆಗಳು ಅಥವಾ ಪೂರ್ವಾಗ್ರಹಗಳನ್ನು ಪರಿಶೀಲಿಸಲು ನಿರಾಕರಿಸುವುದು ಅಂತಹ ಆಚರಣೆಗಳನ್ನು ಗಟ್ಟಿಗೊಳಿಸುತ್ತದೆ. ಅಂತಹ ಆಚರಣೆಗಳು ಸಮಾಜದಂಚಿನಲ್ಲಿರುವ ಜಾತಿಗಳ ದಬ್ಬಾಳಿಕೆಯನ್ನು ಆಧರಿಸಿದ್ದರೆ, ಅಂತಹ ಆಚರಣೆಗಳನ್ನು ಅಸ್ಪೃಶ್ಯವಾಗಿ ಉಳಿಸಲಾಗದು. ಸಂವಿಧಾನವು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಕೊನೆಗೊಳಿಸಲು ಆದೇಶಿಸುತ್ತದೆ ” ಎಂದು ನ್ಯಾಯಾಲಯ ಹೇಳಿದೆ.
10. ಕಾಯಿದೆ ಮತ್ತು ಕೈಪಿಡಿಯಲ್ಲಿನ ಅಂತರಗಳು
ಡಿನೋಟಿಫೈಡ್ ಬುಡಕಟ್ಟುಗಳನ್ನು ರೂಢಿಗತ ಅಪರಾಧಿಗಳು ಎಂದು ಕರೆಯುವ ವ್ಯಾಖ್ಯಾನವನ್ನು ಅಸ್ಪಷ್ಟವಾಗಿ ಉಳಿಸಿಕೊಂಡಿರುವುದಕ್ಕೆ 2016ರ ಮಾದರಿ ಜೈಲು ಕೈಪಿಡಿ ಮತ್ತು 2023ರ ಮಾದರಿ ಕಾರಾಗೃಹ ಮತ್ತು ತಿದ್ದುಪಡಿ ಸೇವಾ ಕಾಯಿದೆಗಳೆರಡನ್ನೂ ಸುಪ್ರೀಂ ಕೋರ್ಟ್ ಟೀಕಿಸಿತು.
ಅಂತೆಯೇ ಯಾವುದೇ ಕೈದಿ ಮಲಹೊರುವ ಅಥವಾ ಅಪಾಯಕಾರಿ ಶೌಚಗುಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.