Gujarat High Court, Mahesh Langa 
ಸುದ್ದಿಗಳು

ಜಿಎಸ್‌ಟಿ ವಂಚನೆ ಪ್ರಕರಣ: ಬಂಧನ ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ ʼದ ಹಿಂದೂʼ ಪತ್ರಕರ್ತ ಮಹೇಶ್ ಲಾಂಗಾ

ಲಾಂಗಾ ಹಾಗೂ ಮೂವರನ್ನು ಅಕ್ಟೋಬರ್ 8ರಂದು ಬೆಳಿಗ್ಗೆ ಗುಜರಾತ್‌ ಇತರ ಮೂವರ ಜೊತೆಗೆ ಅಪರಾಧ ಪತ್ತೆ ವಿಭಾಗ (ಡಿಸಿಬಿ) ಬಂಧಿಸಿತ್ತು.

Bar & Bench

ತಮ್ಮನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಆರೋಪ ಒಳಗೊಂಡ ಪ್ರಕರಣದಲ್ಲಿ ಬಂಧಿತರಾಗಿರುವ ʼದ ಹಿಂದೂʼ ಪತ್ರಿಕೆಯ ಪತ್ರಕರ್ತ ಮಹೇಶ್ ಲಾಂಗಾ ಅವರು ಗುಜರಾತ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನ್ಯಾಯಮೂರ್ತಿ ಸಂದೀಪ್ ಭಟ್ ಅವರಿದ್ದ ಪೀಠದೆದುರು ಲಾಂಗಾ ಅವರ ಪರವಾಗಿ ಪ್ರಕರಣ ಪ್ರಸ್ತಾಪಿಸಿದ ಹಿರಿಯ ವಕೀಲ ಜಲ್ ಉನ್ವಾಲಾ ಅವರು ವಿವೇಚನಾರಹಿತವಾಗಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪೊಲೀಸ್‌ ವಶಕ್ಕೆ ನೀಡಿದೆ. ಲಾಂಗಾ ಅವರ ಬಂಧನ ರಾಜಕೀಯ ಪ್ರೇರಿತ. ಅವರು ಪತ್ರಿಕೋದ್ಯಮದಲ್ಲಿ ತೊಡಗದಂತೆ ಮಾಡಲು ಹೀಗೆ ಮಾಡಲಾಗಿದೆ ಎಂದರು.

ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸಲ್ಲಿಸುವಾಗ ವಂಚನೆ ಎಸಗಿದ ಆರೋಪದ ಮೇಲೆ 13 ಸಂಸ್ಥೆಗಳು ಮತ್ತು ಅವುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಜಿಎಸ್‌ಟಿ ವಂಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು, ಆರೋಪಿಗಳು ನಕಲಿ ಬಿಲ್‌ ಮೂಲಕ ಐಟಿಸಿ ಪಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ಯೋಜನೆಯ ಭಾಗವಾಗಿ ನಕಲಿ ದಾಖಲೆಗಳನ್ನು ಬಳಸಿ 220ಕ್ಕೂ ಹೆಚ್ಚು ಬೇನಾಮಿ ಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು ಎಂದು ಎಫ್‌ಐಆರ್‌‌ ವಿವರಿಸಿತ್ತು. ಅವುಗಳಲ್ಲಿ ಒಂದು ಸಂಸ್ಥೆಗೂ ಪತ್ರಕರ್ತ ಲಾಂಗಾ ಅವರಿಗೂ ನಂಟಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಇದು ಆಧಾರರಹಿತ. ಎಫ್ಐಆರ್‌ನಲ್ಲಿ ಲಾಂಗಾ ಅವರ ಹೆಸರಿಲ್ಲ. ಬದಲಿಗೆ, ಅವರ ಸೋದರ ಸಂಬಂಧಿಯ ಹೆಸರನ್ನು ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ ಎಂದು ವಾದಿಸಲಾಯಿತು.

ಪ್ರಕರಣವನ್ನು ಶುಕ್ರವಾರ ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ಮನವಿಯ ಪ್ರತಿಗಳನ್ನು ಸಲ್ಲಿಸುವಂತೆ ಲಾಂಗಾ ಪರ ವಕೀಲರಿಗೆ ತಿಳಿಸಿತು. ಇದೇ ವೇಳೆ ಅಕ್ಟೋಬರ್ 14ರಂದು (ಸೋಮವಾರ) ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಅಷ್ಟರೊಳಗೆ ಸರ್ಕಾರದಿಂದ ಮಾಹಿತಿ ಪಡೆಯುವಂತೆ ಸರ್ಕಾರದ ಪರ ವಕೀಲರಿಗೆ ಅದು ಸೂಚಿಸಿತು.