S Balan, Advocate, Karnataka High Court 
ಸುದ್ದಿಗಳು

ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಹಕ್ಕಿಗೆ ಯುಎಪಿಎ ಕಾಯಿದೆ ವಿರುದ್ಧ: ಕರ್ನಾಟಕ ಹೈಕೋರ್ಟ್ ವಕೀಲ ಎಸ್ ಬಾಲನ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಅಧ್ಯಕ್ಷ ವೈ ಜೆ ರಾಜೇಂದ್ರ ಕೃತಿ ಬಿಡುಗಡೆ ಮಾಡಿದರು.

Ramesh DK

ಸಂವಿಧಾನದ 14ನೇ ವಿಧಿಯಡಿ ದೊರೆತ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಹಕ್ಕಿಗೆ ಯುಎಪಿಎ ಕಾಯಿದೆ ವಿರುದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ವಕೀಲ ಹಾಗೂ ಎನ್‌ಸಿಎಚ್‌ಆರ್‌ಒ ರಾಜ್ಯಾಧ್ಯಕ್ಷ ಎಸ್‌ ಬಾಲನ್‌ ಅಭಿಪ್ರಾಯಪಟ್ಟರು.

ಮೂವ್‌ಮೆಂಟ್‌ ಎಗೇನ್ಸ್ಟ್‌ ಯುಎಪಿಎ ಅಂಡ್‌ ಅದರ್‌ ರೆಪ್ರೆಸ್ಸೀವ್‌ ಲಾಸ್‌ (ಎಂಯುಆರ್‌ಎಲ್‌) ಸಂಘಟನೆ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಎಗೇನ್ಸ್ಟ್‌ ದ ವೆರಿ ಐಡಿಯಾ ಆಫ್‌ ಜಸ್ಟೀಸ್‌ ಯುಎಪಿಎ ಅಂಡ್‌ ಅದರ್‌ ಲಾಸ್‌ʼ ಕೃತಿ ಬಿಡುಗಡೆ ಕಾರ್ಯಕ್ರಮ ಮತ್ತು ವೆಬಿನಾರ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ಇಂತಹ ಕಾನೂನುಗಳು ಸಂವಿಧಾನದ 19 ಎ- ಜಿವರೆಗಿನ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಯುಎಪಿಎ ಕಾಯಿದೆಯ ಸೆಕ್ಷನ್‌ 35ರ ಅಡಿ ದೇಶದಲ್ಲಿ ದಲಿತರು, ಆದಿವಾಸಿಗಳು ರೈತರು ಕಾರ್ಮಿಕರಿಗೆ ಸಂಬಂಧಪಟ್ಟ 41 ಸಂಘಟನೆಗಳನ್ನು ನಿಷೇಧಿಸಲಾಗಿದೆ. ಆದರೆ ಕಾರ್ಪೊರೇಟ್‌ಗಳು ಹಾಗೂ ಹಿಂದೂ ರಾಷ್ಟ್ರದ ಪರವಾಗಿ ಇರುವವರನ್ನು ಬಂಧಿಸಿಲ್ಲ. ಸಮಾಜದ ಬಲಾಢ್ಯರನ್ನು ರಕ್ಷಿಸಲು ಈ ಕಾನೂನು ಹೇಗೆ ರೂಪುಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ” ಎಂದು ಅವರು ತಿಳಿಸಿದರು.

“ಯುಎಪಿಎ ಮತ್ತು ಎನ್‌ಐಎ ಕಾಯಿದೆ ಸೇರಿದಂತೆ ಎಲ್ಲಾ ಮಾನವ ಹಕ್ಕು ವಿರೋಧಿ ಕರಾಳ ಕಾಯಿದೆಗಳು ಇಲ್ಲವಾಗಬೇಕು. ಐಪಿಸಿ , ಸಿಆರ್‌ಪಿಸಿ ಹಾಗೂ ಎವಿಡೆನ್ಸ್‌ ಕಾಯಿದೆಯಲ್ಲಿಯೇ ಸಾಕಷ್ಟು ಅಂಶಗಳು ಇದ್ದು ಅವುಗಳನ್ನೇ ಮುಂದುವರೆಸಬೇಕು” ಎಂದು ಅವರು ಮನವಿ ಮಾಡಿದರು.

ಪೀಪಲ್ಸ್‌ ಲಾಯರ್ಸ್‌ ಗಿಲ್ಡ್‌ನ ಅಧ್ಯಕ್ಷರಾದ ವಕೀಲ ಅನೀಸ್ ಪಾಷ‌ ಮಾತನಾಡಿ “ಒಬ್ಬ ವ್ಯಕ್ತಿ ತನ್ನ ಧ್ವನಿ ಎತ್ತಬಾರದೆಂದು ಈ ಕಾಯಿದೆ ರೂಪಿಸಲಾಗಿದೆ. ಎಲ್ಲಾ ಸರ್ಕಾರಗಳಿಗೂ ಈ ಕಾನೂನು ಬೇಕಾಗಿದೆ ಎನಿಸುತ್ತದೆ. ಹಾಗಾಗಿಯೇ ಇದನ್ನೊಂದು ಅಸ್ತ್ರವಾಗಿ ಎಲ್ಲಾ ಸರ್ಕಾರಗಳು ಬಳಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದರು.

“ಈ ಕಾಯಿದೆಯನ್ನು ಯಾವುದೇ ಸರ್ಕಾರ ಯಾವುದೇ ಕಾರಣಕ್ಕೂ ತೆಗೆದುಹಾಕುವುದಿಲ್ಲ. ಕಾಯಿದೆಯಡಿ ಉದ್ದೇಶಪೂರ್ವಕವಾಗಿ ಸುಳ್ಳು ಮೊಕದ್ದಮೆ ಹೂಡುವ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು” ಎಂದು ಅವರು ಹೇಳಿದರು.

ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಅಧ್ಯಕ್ಷ ವೈ ಜೆ ರಾಜೇಂದ್ರ ಕೃತಿಯನ್ನು ಬಿಡುಗಡೆ ಮಾಡಿದರು. ಮೈಸೂರಿನ ಮಾನವ ಹಕ್ಕುಗಳ ಹೋರಾಟಗಾರ ಡಾ. ವಿ ಲಕ್ಷ್ಮೀನಾರಾಯಣ್‌, ಪೀಪಲ್ಸ್‌ ಡೆಮಾಕ್ರಟಿಕ್‌ ಫೋರಂನ ಡಾ. ವಿ ಎಸ್‌ ಶ್ರೀಧರ್‌ ಮಾತನಾಡಿದರು. ಕಾರ್ಯಕ್ರಮ ಸಂಚಾಲಕ, ವಕೀಲ ಒಮರ್‌ ಫರೂಕ್‌ ಉಪಸ್ಥಿತರಿದ್ದರು.