Sonam Wangchuk 
ಸುದ್ದಿಗಳು

ವಾಂಗ್‌ಚುಕ್‌ ಬಂಧನ ಪ್ರಕರಣ: ಕೇಂದ್ರದ ವಾದಮಂಡನೆ ಅನಂತ ಕಾಲ ಮುಂದುವರೆಯಲಾಗದು ಎಂದ ಗೀತಾಂಜಲಿ ಆಂಗ್ಮೋ

ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕೋರಿ ಲೇಹ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ವಾಂಗ್‌ಚುಕ್‌ ಅವರನ್ನು 2025ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

Bar & Bench

ಲಡಾಖ್‌ಗೆ ಪ್ರತ್ಯೇಕ ರಾಜ್ಯ ಸ್ಥಾನ ನೀಡಲು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಚಿಂತಕ, ಸೋನಮ್ ವಾಂಗ್‌ಚುಕ್‌ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿರುವುದನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ವಾದ ಮಂಡನೆಗೆ ಹೆಚ್ಚಿನ ಕಾಲಾವಕಾಶ ಕೋರಿದ್ದ ಕೇಂದ್ರ ಸರ್ಕಾರದ ನಡೆಗೆ ವಾಂಗ್‌ಚುಕ್‌ ಪತ್ನಿ ಗೀತಾಂಜಲಿ ಜೆ ಆಂಗ್ಮೊ ಗುರುವಾರ ವಿರೋಧ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠ ಗುರುವಾರ ಪ್ರಕರಣದ ವಿಚಾರಣೆ ನಡೆಸಿತು.

ಈ ವೇಳೆ, ವಾಂಗ್ಚುಕ್ ವಿರುದ್ಧ ಮುಂಜಾಗರೂಕತಾ ಬಂಧನದ ಆದೇಶ ನೀಡಿದ ಅಧಿಕಾರಿಗಳು ಇದಕ್ಕಾಗಿ ಉಲ್ಲೇಖಿಸಿದ ವಿಡಿಯೋಗಳು ಅಥವಾ ಹೇಳಿಕೆಗಳ ಲಿಪ್ಯಂತರ ತಪ್ಪಾಗಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಎಸ್‌ಜಿ ತುಷಾರ್‌ ಮೆಹ್ತಾ ಅವರು ಕೋರಿದ್ದಕ್ಕೆ ಆಂಗ್ಮೋ ಆಕ್ಷೇಪ ಸೂಚಿಸಿದರು.

40 ನಿಮಿಷಗಳ ವಿಡಿಯೋ ಇದೆ. ಅನುವಾದ ತಪ್ಪಾಗಿದೆ ಎಂಬ ವಾದದ ಬಗ್ಗೆ ಮಾಹಿತಿ ನೀಡಬೇಕಿದೆ ಎಂದು ಮೆಹ್ತಾ ಹೇಳಿದರು.

ಆಂಗ್ಮೋ ಅವರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಅವರು ಅಧಿಕಾರಿಗಳು ಈ ಆರೋಪಗಳಿಗೆ ತಮ್ಮ ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ಯಾವುದೇ ಉತ್ತರ ನೀಡಿಲ್ಲ; ಆದ್ದರಿಂದ ಈಗ ಅವರಿಗೆ ಮತ್ತಷ್ಟು ಸಮಯ ನೀಡಬಾರದು. ಪ್ರಕರಣ ಅನಂತಕಾಲ ಮುಂದುವರೆಯಲು ಅವಕಾಶ ಒದಗಿಸಬಾರದು. ಅಧಿಕಾರಿಗಳಿಗೆ ಈಗಾಗಲೇ ಒಂದು ಅವಕಾಶ ನೀಡಲಾಗಿತ್ತು ಎಂದು ವಾದಿಸಿದರು.

ನ್ಯಾಯಾಲಯದ ನಿರ್ದೇಶನದಂತೆ, ವಾಂಗ್ಚುಕ್ ವಿರುದ್ಧ ಉಲ್ಲೇಖಿಸಲಾದ ವಿಡಿಯೋಗಳನ್ನು ಹೊಂದಿದ್ದ ಪೆನ್‌ಡ್ರೈವ್‌ನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು. ಎಂಟು ವಿಡಿಯೋಗಳಲ್ಲಿ ಕೇವಲ ನಾಲ್ಕು ವಿಡಿಯೋಗಳ ಪ್ರತಿಗಳು ಮಾತ್ರ ವಾಂಗ್ಚುಕ್ ಅವರಿಗೆ ನೀಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಎಲ್ಲಾ ವಿಡಿಯೋಗಳಿಂದ ಸುಮಾರು 17 ನಿಮಿಷಗಳ ಆಯ್ದ ಭಾಗಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ವಿಡಿಯೋಗಳ ಸಂಪೂರ್ಣ ದೃಶ್ಯ ಮತ್ತು ಧ್ವನಿಮುದ್ರಿಕೆಯನ್ನು ನೀಡದೆ ಕೇವಲ ಥಂಬ್‌ನೇಲ್‌ಗಳನ್ನು ತೋರಿಸಲಾಗಿದೆ; ಜೊತೆಗೆ ವಾಂಗ್ಚುಕ್ ಹಿಂಸಾಮಾರ್ಗದ ಪ್ರತಿಭಟನೆಯನ್ನು ತಿರಸ್ಕರಿಸಿದ ಹೇಳಿಕೆಗಳನ್ನು ಪರಿಗಣಿಸಿಲ್ಲ ಎಂದು ಸಿಬಲ್ ವಾದಿಸಿದರು.

ಆದರೆ ಸಾಲಿಸಿಟರ್‌ ಜನರಲ್‌ ಅವರ ವಾದ ಆಲಿಸುವುದಕ್ಕಾಗಿ ಪೀಠವು ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು. ಫೆಬ್ರವರಿ 16ರಂದು ನ್ಯಾಯಾಲಯ  ವಾಂಗ್‌ಚುಕ್‌ ವಿರುದ್ಧ ಉಲ್ಲೇಖಿಸಲಾದ ವಿಡಿಯೋಗಳ ಲಿಪ್ಯಂತರ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.