ತಮ್ಮ ವೃತ್ತಿಪರ ಕರ್ತವ್ಯದ ಭಾಗವಾಗಿ ಕಕ್ಷಿದಾರರ ಪರ ಇಮೇಲ್ ಕಳುಹಿಸಿದ್ದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರಿಗೆ ಸಿಬಿಐ ನೀಡಿದ್ದ ಸಮನ್ಸ್‌ಗೆ ದೆಹಲಿ ಹೈಕೋರ್ಟ್ ಶನಿವಾರ ತಡೆ ನೀಡಿದೆ. [ಸಚಿನ್ ಬಾಜಪೇಯಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]
ತನಿಖಾಧಿಕಾರಿ ನ್ಯಾಯಾಲಯದೆದುರು ಹಾಜರಾಗುವಂತೆ ನ್ಯಾ. ಸ್ವರಣ ಕಾಂತ ಶರ್ಮ ಸಮನ್ಸ್ ನೀಡಿದರು. ಈ ಬಗೆಯ ವರ್ತನೆ ಮುಂದುವರೆಯಲು ಅವಕಾಶವಿತ್ತರೆ ವಕೀಲರು ಕೆಲಸ ಮಾಡಲಾಗದು ಎಂದು ನ್ಯಾಯಾಲಯ ಹೇಳಿತು.
ಅಂತೆಯೇ ಸಿಬಿಐ ಸಮನ್ಸ್‌ಗೆ ತಡೆ ನೀಡುತ್ತಿರುವುದಾಗಿ ತಿಳಿಸಿದ ನ್ಯಾಯಾಲಯ ತನಿಖಾಧಿಕಾರಿ ತನ್ನೆದುರು ಹಾಜರಾಗಬೇಕು. ಇದು ಸರಿಯಲ್ಲ. ಈ ರೀತಿ ನಡೆದುಕೊಂಡರೆ ವಕೀಲರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿತು. ಪ್ರಕರಣದ ಮುಂದಿನ ವಿಚಾರಣೆ ಮಂಗಳವಾರ (ಡಿಸೆಂಬರ್ 23) ನಡೆಯಲಿದೆ.
ಡಿಸೆಂಬರ್ 19ರಂದು ಸಿಬಿಐ ಹೊರಡಿಸಿದ್ದ ನೋಟಿಸ್ ರದ್ದುಗೊಳಿಸುವಂತೆ ಕೋರಿ ವಕೀಲ ಸಚಿನ್ ಬಾಜಪೇಯಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ ನ್ಯಾಯಾಲಯ ಈ ಸೂಚನೆಗಳನ್ನು ನೀಡಿದೆ. ಬಿಎನ್‌ಎಸ್‌ಎಸ್ ಸೆಕ್ಷನ್ 94 ಮತ್ತು 179ರ ಅಡಿ ಸಿಬಿಐ ನೋಡಿದ್ದ ನೋಟಿಸ್ ಬಾಜಪೇಯಿ ಅವರು ತನಿಖಾಧಿಕಾರಿ ಎದುರು ಹಾಜರಾಗಬೇಕು ಎಂದಿತ್ತು.
ಲಾರ್ಡ್ ಮಹಾವೀರ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಎಫ್‌ಐಆರ್ ದಾಖಲಾದ ನಂತರ ಕಂಪನಿಯ ನಿರ್ದೇಶಕರಲ್ಲಿ ಒಬ್ಬರು ಕಾನೂನು ನೆರವು ಕೋರಿ ವಕೀಲ ಬಾಜಪೇಯಿ ಅವರನ್ನು ಸಂಪರ್ಕಿಸಿದ್ದರು. ತನಿಖೆಗೆ ಸಹಕರಿಸುವ ವೇಳೆ ಕಂಪನಿಯೊಂದರ ಸಿಬ್ಬಂದಿಯನ್ನು ಅಕ್ರಮವಾಗಿ ವಶದಲ್ಲಿಟ್ಟು ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪವೂ ಅರ್ಜಿಯಲ್ಲಿ ಉಲ್ಲೇಖವಾಗಿತ್ತು.
ಡಿಸೆಂಬರ್ 15ರಂದು ಕಕ್ಷಿದಾರರ ಸೂಚನೆಯಂತೆ ಬಾಜಪೇಯಿ ಅವರು ಸಿಬಿಐಗೆ ದಾಖಲೆಗಳು ಮತ್ತು ಮಾಹಿತಿಯನ್ನು ಲಗತ್ತಿಸಿ ಇಮೇಲ್ ಕಳುಹಿಸಿದ್ದರು. ನಂತರ ತಮ್ಮ ಕಕ್ಷಿದಾರರಿಗೆ ನಿರೀಕ್ಷಣಾ ಜಾಮೀನು ಕೊಡಿಸಿದ್ದರು. ಆದರೆ ಇದಾದ ನಂತರ ಬಾಜಪೇಯಿ ಅವರು ತನ್ನೆದುರು ಹಾಜರಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸಿಬಿಐ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿದ ಬಾಜಪೇಯಿ ಅವರು ಈ ಸಮನ್ಸ್ ಮನಸೋಇಚ್ಛೆಯಿಂದ ಕೂಡಿದ್ದು ಕಾನೂನಾತ್ಮಕ ಆಡಳಿತಕ್ಕೆ ಅಡ್ಡಿ ಉಂಟುಮಾಡುತ್ತದೆ. ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವ ವಕೀಲರನ್ನು ಗುರಿಯಾಗಿಸುವ ಅಪಾಯಕಾರಿ ಪರಂಪರೆ ಇದರಿಂದ ನಿರ್ಮಾಣವಾಗುತ್ತದೆ ಎಂದು ವಾದಿಸಿದರು.