Picture taken by Justice Sanjay Karol 
ಸುದ್ದಿಗಳು

ಋತುಚಕ್ರದ ವೇಳೆ ಮನೆಯಿಂದ ಬಹಿಷ್ಕೃತವಾಗಿದ್ದ ಮಹಿಳೆಯ ಚಿತ್ರ ತೋರಿಸಿ ಕಳವಳ ವ್ಯಕ್ತಪಡಿಸಿದ ನ್ಯಾ. ಕರೋಲ್‌

2023ರಲ್ಲಿ ತೆಗೆದ ಛಾಯಾಚಿತ್ರವನ್ನು ನ್ಯಾ. ಸಂಜಯ್ ಕರೋಲ್ ತೋರಿಸಿದ್ದು ಅದರಲ್ಲಿ ಋತುಚಕ್ರದ ಅವಧಿಯಲ್ಲಿ ಮಹಿಳೆಯು ಮನೆಯ ಹೊರಗೆ ಟೆಂಟ್‌ನಲ್ಲಿ ಇರುವುದು ಕಂಡುಬಂದಿದೆ.

Bar & Bench

ಋತುಚಕ್ರದ ಸಮಯದಲ್ಲಿ ತನ್ನ ಮನೆಯ ಹೊರಗೆ ಇರಬೇಕಾದಂತಹ ಸ್ಥಿತಿಗೆ ತುತ್ತಾದ ಮಹಿಳೆಯೊಬ್ಬರ ಕತೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಬಿಚ್ಚಿಟ್ಟರು.

ಗೋವಾದಲ್ಲಿ ಶನಿವಾರ ಆರಂಭವಾದ ಪ್ರಪ್ರಥಮ, ಅಂತರರಾಷ್ಟ್ರೀಯ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಕಾನೂನು ಸಮಾವೇಶದಲ್ಲಿ ಮಾತನಾಡಿದ ಅವರು 2023ರಲ್ಲಿ ತಾವು ತೆಗೆದ ಛಾಯಾಚಿತ್ರವನ್ನು ಸಭಿಕರೆದುರು ಪ್ರಸ್ತುತಪಡಿಸಿದರು. ಚಿತ್ರದಲ್ಲಿ ಋತುಚಕ್ರದ ಅವಧಿಯಲ್ಲಿ ಮಹಿಳೆಯೊಬ್ಬರು ಮನೆಯ ಹೊರಗೆ ಟೆಂಟ್‌ನಲ್ಲಿ ವಾಸಿಸುತ್ತಿರುವ ದೃಶ್ಯವಿದೆ.

"ನಾನು ಕುಗ್ರಾಮವೊಂದರಲ್ಲಿ ತೆಗೆದ ಚಿತ್ರ ಇದು. ದೈಹಿಕ ಬದಲಾವಣೆಯ ಕಾರಣಕ್ಕೆ ಬಳಲುವ ಮಹಿಳೆಯೊಬ್ಬರುಆ ಐದು ದಿನಗಳ ಕಾಲ ತನ್ನ ಮನೆ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿತ್ತು. ಇದು ನಾವು ವಾಸಿಸುತ್ತಿರುವ ಭಾರತ. ನಾವು ಇಂತಹ ಜನರನ್ನು ತಲುಪಬೇಕಾಗಿದೆ”ಎಂದು ಅವರು ಕರೆ ನೀಡಿದರು.

ಚಿತ್ರವನ್ನು ಎಲ್ಲಿ ತೆಗೆಯಲಾಗಿದೆ ಎಂಬುದನ್ನು ನ್ಯಾಯಾಧೀಶರು ಬಹಿರಂಗಪಡಿಸದಿದ್ದರೂ, ಅವರು ಬಿಹಾರ ಮತ್ತು ತ್ರಿಪುರದ ಹಳ್ಳಿಗಾಡನ್ನು ಉಲ್ಲೇಖಿಸುತ್ತಾ , ಅಲ್ಲಿ ನ್ಯಾಯಾಲಯ ವ್ಯವಸ್ಥೆ ಇನ್ನೂ ತಲುಪಿಲ್ಲ ಎಂದರು.

 ಸಾಮಾಜಿಕ ನ್ಯಾಯ ಮತ್ತು ಮಹಿಳಾ ಹಕ್ಕುಗಳು ಎಂಬ ವಿಚಾರ ಪ್ರಸ್ತಾಪಿಸುವ ಸಂದರ್ಭದಲ್ಲಿ ಈ ಚಿತ್ರ ಪ್ರದರ್ಶಿಸಿದ ಅವರು ಮಹಿಳೆಯರು ಮತ್ತು ಅಂಗವಿಕಲ ವ್ಯಕ್ರಿಗಳ ಪರವಾಗಿ ಈ ಹಿಂದೆ ನ್ಯಾಯಾಲಯಗಳು ಮಧ್ಯಪ್ರವೇಶಿಸಿದ್ದನ್ನು ನೆನೆದರು.

ಸಂವಿಧಾನದ ಪಾಲಕರು ಮತ್ತು ರಕ್ಷಕರಾಗಿರುವ ನಾವು ನ್ಯಾಯ ಎಂದರೇನು ಎಂದು ತಿಳಿಯದ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಬಗ್ಗೆ ಅರಿವಿರದವರನ್ನು, ನ್ಯಾಯ ದೊರೆಯದಿರುವವರನ್ನು ತಲುಪುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ನ್ಯಾಯಮೂರ್ತಿ ಸಂಜಯ್ ಕರೋಲ್

ನ್ಯಾಯ ಎಂಬುದು ಪ್ರಮುಖವಾಗಿ ವಿದ್ಯಾವಂತರು ಮತ್ತು ಮಹಾನಗರಗಳಲ್ಲಿ ವಾಸಿಸುತ್ತಿರುವವರಿಗೆ ದೊರೆಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಭಾರತ ಎಂದರೆ ದೆಹಲಿಯಲ್ಲ, ಭಾರತ ಎಂದರೆ ಬಾಂಬೆಯಲ್ಲ, ಸಂವಿಧಾನದ ಪಾಲಕರು ಮತ್ತು ರಕ್ಷಕರಾಗಿರುವ ನಾವು ನ್ಯಾಯ ಎಂದರೇನು ಎಂದು ತಿಳಿಯದ, ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಬಗ್ಗೆ ಅರಿವಿರದವರನ್ನು, ನ್ಯಾಯ ದೊರೆಯದಿರುವವರನ್ನು ತಲುಪುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

"ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ನೀವು ಅವರೊಟ್ಟಿಗೆ ಒಡನಾಡಿದ್ದೀರಾ? ನೀವು ಅವರನ್ನು ತಲುಪಿದ್ದೀರಾ? ನೀವು ಅವರನ್ನು ಅರ್ಥಮಾಡಿಕೊಂಡಿದ್ದೀರಾ?" ಎಂದು ಸಭಿಕರನ್ನು ಅವರು ಪ್ರಶ್ನಿಸಿದರು.

 ಸಂವಿಧಾನ ಜೀವಂತ ದಾಖಲೆಯಾಗಿದ್ದು ಇದು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಮುನ್ನಡೆಸುವಲ್ಲಿ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದ ಅವರು "ಅಸಮಾನತೆ ಎಂಬುದು ಕೇವಲ ಸಂಪನ್ಮೂಲಗಳ ಕೊರತೆಯಾಗಿರದೆ ಇತರರ ಹೋಲಿಕೆಯಲ್ಲಿ ಇರುವ ಅಗಾಧ ಕೊರತೆಯ ಅನುಭವವಾಗಿದೆ" ಎಂದು ಅವರು ವಿವರಿಸಿದರು.

ಸಮಾವೇಶದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.