ಕೃಷಿ ಉಪಕರಣಗಳಿಗೆ ಸಂಬಂಧಿಸಿದ ವಾಣಿಜ್ಯ ಚಿಹ್ನೆ ಪ್ರಕರಣದಲ್ಲಿ ತೀರ್ಪು ನೀಡಿರುವ ದೆಹಲಿ ಹೈಕೋರ್ಟ್ ಟೈಗರ್ ಮತ್ತು ಬ್ರಾಂಡ್ ಎಂಬ ಪದಗಳು ಸಾಮಾನ್ಯ ಸ್ವರೂಪದವಾಗಿದ್ದು ಅವುಗಳ ಮೇಲೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ವಿಶೇಷ ಹಕ್ಕು ಚಲಾಯಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ [ಮಯಾಂಕ್ ಜೈನ್ ಮತ್ತು ಅತುಲ್ಯ ಡಿಸ್ಕ್ಸ್ ನಡುವಣ ಪ್ರಕರಣ]
ಅತುಲ್ಯ ಡಿಸ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತಿತರರ ವಿರುದ್ಧ ಮಹಾವೀರ್ ಉದ್ಯೋಗ್‌ನ ಮಾಲೀಕ ಮಯಾಂಕ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಜನವರಿ 9ರಂದು ನೀಡಿದ ತೀರ್ಪಿನಲ್ಲಿ ವಜಾಗೊಳಿಸಿದರು.
“ಪಕ್ಷಕಾರರ ಮನವಿ ಮತ್ತು ಅರ್ಜಿಗಳಲ್ಲಿರುವ ವಾದ ಪರಿಶೀಲಿಸಿದ ಬಳಿಕ ಟೈಗರ್ ಮತ್ತು ಬ್ರ್ಯಾಂಡ್ ಎಂಬ ಚಿಹ್ನೆಗಳು ವ್ಯಾಪಾರದಲ್ಲಿ ಸಾಮಾನ್ಯವಾಗಿ ಬಳಸುವ ಪದಗಳಾಗಿರುವುದರಿಂದ ಅವುಗಳ ಮೇಲೆ ಅರ್ಜಿದಾರರಿಗೆ ವಿಶೇಷ ಹಕ್ಕು ಇರುವುದಿಲ್ಲʼ ಎಂದು ತೀರ್ಪು ವಿವರಿಸಿದೆ.
1997ರಲ್ಲಿ ಸ್ಥಾಪಿತವಾದ ಮಹಾವೀರ ಉದ್ಯೋಗ ಸಂಸ್ಥೆ ಸಂಕೀರ್ಣ ಬಗೆಯ ನೇಗಿಲುಗಳು ಟ್ರ್ಯಾಕ್ಟರ್‌ಗೆ ಜೋಡಿಸುವ ನೇಗಿಲುಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿದೆ. ಅರ್ಜಿದಾರರ ವಾದದ ಪ್ರಕಾರ, ಅವರು ʼಟೈಗರ್ ಗೋಲ್ಡ್ ಬ್ರಾಂಡ್ʼ ಎಂಬ ಸಾಧನ ಚಿಹ್ನೆಯನ್ನು 2010ರಿಂದ ಬಳಕೆ ಮಾಡುತ್ತಿದ್ದು, 2023ರಲ್ಲಿ ಅದಕ್ಕೆ ನೋಂದಣಿ ದೊರೆತಿದೆ. ತಮ್ಮ ಗುರುತಿಗೆ ಉತ್ತಮ ವರ್ಚಸ್ಸು ಮತ್ತು ವಾಣಿಜ್ಯಿಕ ಸುಪರಿಚಿತತೆ ಇದೆ. ಆದರೆ, ಪ್ರತಿವಾದಿಗಳು “ಟೈಗರ್ ಪ್ರೀಮಿಯಂ ಬ್ರಾಂಡ್” ಹೆಸರಿನಲ್ಲಿ ಅದೇ ರೀತಿಯ ಕೃಷಿ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದಾರೆ., ಅದು ಗ್ರಾಹಕರಲ್ಲಿ ಗೊಂದಲ ಉಂಟುಮಾಡುತ್ತದೆ" ಎಂದು ಅರ್ಜಿದಾರರು ವಾದಿಸಿದ್ದರು.
ಈ ವಾದವನ್ನು ಬದಿಗೆ ಸರಿಸಿದ ನ್ಯಾಯಾಲಯ, 'ಟೈಗರ್ʼ ಪದವು ವ್ಯಾಪಾರದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಪದವಾಗಿದ್ದು, ಅದು ಸಾರ್ವಜನಿಕ ಸ್ವತ್ತು ಎಂದು ಹೇಳಿತು. ಸಾಧನ ಚಿಹ್ನೆ ನೋಂದಣಿ ಪಡೆದಿರುವುದರಿಂದ, ಅದರೊಳಗಿನ ಪ್ರತ್ಯೇಕ ಹಾಗೂ ವಿಶಿಷ್ಟವಲ್ಲದ ಪದಗಳ ಮೇಲೆ ಏಕಸ್ವಾಮ್ಯತೆ ದೊರೆಯುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಅಲ್ಲದೆ, 'ಟೈಗರ್ʼ ಪದಕ್ಕೆ ದ್ವಿತೀಯ ಅರ್ಥ ಬಂದಿದೆ ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯವನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದ ಅದು ಎರಡೂ ಗುರುತುಗಳನ್ನು ಸಂಪೂರ್ಣವಾಗಿ ಪರಿಗಣಿಸಿದಾಗ, ಅವು ಒಂದೇ ರೀತಿಯವು ಎಂಭ ಭ್ರಮೆ ಮೂಡಿಸುವುದಿಲ್ಲ ಎಂಬುದಾಗಿ ತಿಳಿಸಿದೆ.
ಗ್ರಾಹಕರ ದೃಷ್ಟಿಕೋನದಿಂದ, ವಿಶೇಷವಾಗಿ ರೈತರ ದೃಷ್ಟಿಯಿಂದ ನೋಡಿದಾಗ, ಎರಡೂ ಗುರುತುಗಳು ವಿಭಿನ್ನವಾಗಿದ್ದು, ಗೊಂದಲ ಉಂಟುಮಾಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, “ಟೈಗರ್ ಪ್ರೀಮಿಯಂ ಬ್ರ್ಯಾಂಡ್” ಬಳಕೆ ವಾಣಿಜ್ಯ ಚಿಹ್ನೆ ಉಲ್ಲಂಘನೆ, ಸುಳ್ಳು ಪ್ರತಿನಿಧೀಕರಣ ಅಥವಾ ಹಕ್ಕು ಸ್ವಾಮ್ಯ ಉಲ್ಲಂಘನೆ ಎನಿಸದು ಎಂದು ತಿಳಿಸಿದ ಅದು, ತಾತ್ಕಾಲಿಕ ಪ್ರತಿಬಂಧಕಾಜ್ಞೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.
[ತೀರ್ಪಿನ ಪ್ರತಿ]