H Raja 
ಸುದ್ದಿಗಳು

ಪೆರಿಯಾರ್ ಮತ್ತು ಡಿಎಂಕೆ ನಾಯಕರ ಅವಹೇಳನ: ಬಿಜೆಪಿಯ ರಾಜಾಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ತಮಿಳುನಾಡು ನ್ಯಾಯಾಲಯ

ತಮ್ಮ ಎಕ್ಸ್ ಖಾತೆಯಲ್ಲಿ ಅವಹೇಳನ ಮಾಡಿದ ಕುರಿತು ಡಿಎಂಕೆ ಮತ್ತು ಟಿಪಿಡಿಕೆ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ರಾಜಾ ಅವರ ವಿರುದ್ಧ 2018ರಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.

Bar & Bench

ದ್ರಾವಿಡ ಚಳವಳಿಯ ಹರಿಕಾರ ಪೆರಿಯಾರ್‌, ಸಂಸದೆ ಕನಿಮೋಳಿ ಸೇರಿದಂತೆ ಡಿಎಂಕೆ ನಾಯಕರನ್ನು ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಬಿಜೆಪಿ ತಮಿಳುನಾಡು ಸಮನ್ವಯ ಸಮಿತಿ ಅಧ್ಯಕ್ಷ ಎಚ್ ರಾಜಾ ಅವರಿಗೆ ಚೆನ್ನೈನ ವಿಶೇಷ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶ ಪ್ರಕಟಿಸಿದೆ.

ಆದರೆ ರಾಜಾ ಅವರು ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ. ಜಯವೇಲ್ ಅವರು ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತಿನಲ್ಲಿಟ್ಟಿದ್ದಾರೆ.

ರಾಜಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಅವಹೇಳನ ಮಾಡಿದ ಕುರಿತು ಡಿಎಂಕೆ ಮತ್ತು ತಂದೈ ಪೆರಿಯಾರ್ ದ್ರಾವಿಡರ್ ಕಳಗಂ  (ಟಿಪಿಡಿಕೆ) ಸದಸ್ಯರು ನೀಡಿದ ದೂರಿನ ಮೇರೆಗೆ 2018ರಲ್ಲಿ ರಾಜಾ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.     

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ರಾಜಾ 2023ರಲ್ಲಿ ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ್ದದ್ದರು. ಆದರೆ ವಾಸ್ತವಾಂಶಗಳನ್ನು ಆಧರಿಸಿ ಪ್ರಕರಣ ದಾಖಲಾಗಿರುವುದರಿಂದ ರಾಜಾ ಅವರು ವಿಚಾರಣೆ ಎದುರಿಸಬೇಕು ಎಂದು ಆದೇಶಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಮನವಿ ವಜಾಗೊಳಿಸಿದ್ದರು. ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿಹಿಡಿದಿತ್ತು.