TN Governor RN Ravi, Supreme Court 
ಸುದ್ದಿಗಳು

ತಮಿಳುನಾಡು ರಾಜ್ಯಪಾಲರು ತಮ್ಮದೇ ಹಾದಿ ಹಿಡಿದಿದ್ದಾರೆ: ಸುಪ್ರೀಂ ಕೋರ್ಟ್ ಗುಡುಗು

ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಮಸೂದೆಗಳಲ್ಲಿ ರಾಜ್ಯಪಾಲರು ಒಪ್ಪಿಗೆ ನೀಡದಿರುವಷ್ಟು ತೀವ್ರ ತಪ್ಪೇನಾಗಿದೆ ಎಂಬುದನ್ನು ಹೇಳುವಂತೆ ನ್ಯಾಯಾಲಯ ತಾಕೀತು ಮಾಡಿತು.

Bar & Bench

ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳಿಗೆ ಒಪ್ಪಿಗೆ ನೀಡದೆ ರಾಜ್ಯಪಾಲ ಆರ್.ಎನ್. ರವಿ ಅವರು ಸಾಂವಿಧಾನಿಕ ನಿಬಂಧನೆಗಳು ವಿವಾದಕ್ಕೆ ಒಳಗಾಗುವಷ್ಟು ಸ್ವಯಂ ಕಾರ್ಯವಿಧಾನ ರೂಪಿಸಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಗುಡುಗಿದೆ.

ಮಸೂದೆಗೆ ಅಂಗೀಕಾರ ನೀಡುವ ಕುರಿತಂತೆ ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನವೆಂಬರ್ 2023ರಲ್ಲಿ ನೀಡಿದ ತೀರ್ಪಿನ ಹೊರತಾಗಿಯೂ ರಾಜ್ಯಪಾಲ ರವಿ ಅವರು ಹೀಗೆ ನಡೆದುಕೊಂಡಿರುವುದಕ್ಕೆ  ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯ ಮಸೂದೆಗಳನ್ನು ವಿಳಂಬ ಧೋರಣೆ ಅನುಸರಿಸದೆ ಅಂಗೀಕಾರ ಮುದ್ರೆ ಒತ್ತಬೇಕು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿತ್ತು.

ಆ ತೀರ್ಪಿನ ನಂತರವೂ ತಮಿಳುನಾಡು ರಾಜ್ಯಪಾಲರು ಮತ್ತು ಚುನಾಯಿತ ಸರ್ಕಾರದ ನಡುವಿನ ಬಿಕ್ಕಟ್ಟು ಮುಂದುವರೆದಿದೆ ಎಂದಿರುವ ನ್ಯಾಯಾಲಯ ರಾಜ್ಯಪಾಲರು ದುರುದ್ದೇಶದಿಂದ ವರ್ತಿಸುತ್ತಿದ್ದಾರೆ ಎಂಬ ತಮಿಳುನಾಡು ಸರ್ಕಾರದ ಆರೋಪಗಳನ್ನು ಸಮರ್ಥಿಸಿಕೊಳ್ಳಿ ಎಂದು ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಸೂಚಿಸಿತು.  

ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯುವ ಮೂಲಕ, ತಮಿಳುನಾಡು ರಾಜ್ಯಪಾಲರು ಸಂವಿಧಾನದ 200ನೇ ವಿಧಿಗೆ ಸಂಬಂಧಿಸಿದ ನಿಬಂಧನೆಯನ್ನು ರದ್ದುಗೊಳಿಸಿದಂತೆ ಕಂಡುಬರುತ್ತದೆ ಎಂದು ನ್ಯಾಯಾಲಯ ಕಿಡಿಕಾರಿತು.

ಮಸೂದೆ ವಾಪಸ್‌ ಕಳಿಸುವ ಸಂದರ್ಭಗಳಲ್ಲಿ ವಾಪಸ್‌ ಕಳಿಸಿದ ಮಸೂದೆಯನ್ನು ವಿಧಾನಸಭೆ ಮತ್ತೆ ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆಗಾಗಿ ಮತ್ತೆ ಮಂಡಿಸಿದಾಗ ರಾಜ್ಯಪಾಲರು ಒಪ್ಪಿಗೆ ತಡೆಹಿಡಿಯುವಂತಿಲ್ಲ ಎನ್ನುತ್ತದೆ 200 ನೇ ವಿಧಿಯ ನಿಬಂಧನೆ.

ತಮಿಳುನಾಡು ರಾಜ್ಯಪಾಲರು ತಮ್ಮದೇ ಆದ ಕಾರ್ಯವಿಧಾನ ರೂಪಿಸಿಕೊಂಡಂತೆ ತೋರುತ್ತದೆ. ಅವರು ತಮ್ಮ ಕಾರ್ಯಗಳ ಮೂಲಕ ನಿಬಂಧನೆಯ ಎರಡನೇ ಭಾಗವನ್ನು ಅಪ್ರಸ್ತುತವಾಗಿಸಿದ್ದಾರೆ ಎಂದು ನ್ಯಾಯಾಲಯ ಇಂದು ಹೇಳಿದೆ.

ರಾಜ್ಯ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕಾತಿ ಸೇರಿದಂತೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡದೆ ಇರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.

ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ , ಎ.ಎಂ. ಸಿಂಘ್ವಿ, ಮುಕುಲ್ ರೋಹಟ್ಗಿ ಮತ್ತು ಪಿ. ವಿಲ್ಸನ್ ಅವರ ವಾದಗಳನ್ನು ನ್ಯಾಯಾಲಯ ಇಂದು ಆಲಿಸಿತು.

ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಇಂದು ಮಧ್ಯಾಹ್ನ ತಮ್ಮ ವಾದ ಮಂಡಿಸಲು ಪ್ರಾರಂಭಿಸಿದರು. ನಾಳೆಯೂ ಅವರ ವಾದ ಸರಣಿ ಮುಂದುವರೆಯುವ ಸಾಧ್ಯತೆ ಇದೆ.