Supreme Court, Jharkhand 
ಸುದ್ದಿಗಳು

'ಚುನಾವಣೆಯಲ್ಲಿ ತುಂಬಾ ಬಿಜಿ಼ ಇದ್ದಿರಾ?' ಜಾರ್ಖಂಡ್ ಸರ್ಕಾರಕ್ಕೆ ಕುಟುಕಿದ ಸುಪ್ರೀಂ: ನ್ಯಾಯಾಂಗ ನಿಂದನೆ ನೋಟಿಸ್

ಇಪ್ಪತ್ತೆರಡು ಅಭ್ಯರ್ಥಿಗಳು ಹುದ್ದೆಗೆ ಆಯ್ಕೆಯಾಗಿದ್ದರೂ ಅವರ ನೇಮಕಾತಿ ತಿರಸ್ಕರಿಸಿದ್ದ ಕಾರಣಕ್ಕೆ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನ ಪಾಲಿಸುವಲ್ಲಿ ಜಾರ್ಖಂಡ್‌ ಸರ್ಕಾರ ವಿಫಲವಾಗಿತ್ತು.

Bar & Bench

ಸುಮಾರು ಮೂರು ದಶಕಗಳಿಗೂ ಹಿಂದೆಯೇ ಅಂದರೆ 1992ರಲ್ಲಿಯೇ ನಾಲ್ಕನೇ ದರ್ಜೆ ಹುದ್ದೆಗೆ ಆಯ್ಕೆಯಾಗಿದ್ದರೂ ನೇಮಕಾತಿ ದೊರೆಯದೆ ಪರಿತಪಿಸುತ್ತಿದ್ದ 22 ವ್ಯಕ್ತಿಗಳಿಗೆ ಪರಿಹಾರ ನೀಡುವಂತೆ ತಾನು ನೀಡಿದ್ದ ನಿರ್ದೇಶನ ಪಾಲಿಸದ ಜಾರ್ಖಂಡ್‌ ಮುಖ್ಯ ಕಾರ್ಯದರ್ಶಿ ಎಲ್ ಖಿಯಾಂಗ್ಟೆ ಮತ್ತಿತರರಿಗೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ  [ಬಾಲ ಕಿಶನ್ ರಾಮ್‌ ಇನ್ನಿತರರು ಹಾಗೂ ಎಲ್ ಖಿಯಾಂಗ್ಟೆ ಮತ್ತಿತರರ ನಡುವಣ ಪ್ರಕರಣ].

ಕಳೆದ ವರ್ಷ ಅಕ್ಟೋಬರ್ 3 ರಂದು ತಾನು ನೀಡಿದ್ದ ನಿರ್ದೇಶನಗಳ ಪಾಲನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಸರ್ಕಾರಿ ಸ್ಥಾಯಿ ವಕೀಲರಿಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿತು.

ಈ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾ. ಸೂರ್ಯಕಾಂತ್‌ "ಜಾರ್ಖಂಡ್‌ ಅಧಿಕಾರಿಗಳು ಚುನಾವಣೆಯಲ್ಲಿ ಬಿಜಿ಼ ಇದ್ದರೇನೋ... ಬಹುಶಃ ತಮಗೆ ಮಹತ್ವದ್ದು ಎನಿಸಿರುವ ಪಠ್ಯೇತರ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದರು ಎಂದು ಕಾಣುತ್ತದೆ" ಎಂದು ಕುಟುಕಿತು.

ಕಳೆದ ವರ್ಷದ ವಿಚಾರಣೆ ವೇಳೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಕಾಲ ಸರಿದಿರುವುದರಿಂದ ಈಗ ಅವರನ್ನು ನೇಮಕಾತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರಲ್ಲಿ ಮೂವರು ನಿಧನರಾಗಿದ್ದು 16 ಮಂದಿ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ. ಉಳಿದ ಮೂವರಲ್ಲಿ ಇಬ್ಬರಿಗೆ ನೇಮಕಾತಿ ಬಗ್ಗೆ ಉತ್ಸಾಹ ಇಲ್ಲ ಮತ್ತೊಬ್ಬ ಅಭ್ಯರ್ಥಿ ಬಗ್ಗೆ ಮಾಹಿತಿ ಇಲ್ಲ ಎನ್ನುವ ಸರ್ಕಾರದ ಮಾಹಿತಿಯನ್ನು ನ್ಯಾಯಾಲಯವು ಪರಿಗಣಿಸಿತ್ತು.

ಹೀಗಾಗಿ ಅಭ್ಯರ್ಥಿಗಳು ಮತ್ತವರ ಕುಟುಂಬ ಎದುರಿಸಿದ್ದ ಸಂಕಷ್ಟಗಳನ್ನು ಪರಿಗಣಿಸಿ ಅವರಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು. ಮೃತರ ಕುಟುಂಬಕ್ಕೆ  ತಲಾ ₹ 15 ಲಕ್ಷ ಪರಿಹಾರ ದೊರಕಿಸಿಕೊಡಬೇಕು ಎಂದು ನ್ಯಾಯಾಲಯವು ಸರ್ಕಾರಕ್ಕೆ ತಾಕೀತು ಮಾಡಿತ್ತು.

ಆದರೆ ನ್ಯಾಯಾಂಗ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಭ್ಯರ್ಥಿಗಳು ನ್ಯಾಯಾಂಗ ನಿಂದನೆ ಕಾಯಿದೆಯಡಿ ಮತ್ತೆ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.