ಗರ್ಭಾವಸ್ಥೆಯು ಅನಾರೋಗ್ಯ ಅಥವಾ ಅಂಗವೈಕಲ್ಯವಲ್ಲ. ಈ ಕಾರಣಕ್ಕಾಗಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಇತ್ತೀಚೆಗೆ ಹೇಳಿರುವ ದೆಹಲಿ ಹೈಕೋರ್ಟ್, ಕಾನ್ಸ್ಟೇಬಲ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರ ದೈಹಿಕ ಸಾಮರ್ಥ್ಯ ಪರೀಕ್ಷೆ ಮುಂದೂಡಲು ನಿರಾಕರಿಸಿದ್ದ ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಛೀಮಾರಿ ಹಾಕಿದೆ.
ಆರ್‌ಪಿಎಫ್ ಮತ್ತು ಕೇಂದ್ರ ಸರ್ಕಾರ ಮಹಿಳಾ ಅಭ್ಯರ್ಥಿಯನ್ನು ನಡೆಸಿಕೊಂಡ ರೀತಿಗೆ ನ್ಯಾಯಮೂರ್ತಿಗಳಾದ ರೇಖಾ ಪಾಲಿ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠ ತೀವ್ರ ಬೇಸರ ವ್ಯಕ್ತಪಡಿಸಿದೆ. ಮಹಿಳೆಯರಿಗೆ ಸರ್ಕಾರಿ ಉದ್ಯೋಗ ನಿರಾಕರಿಸಲು ತಾಯ್ತನ ಎಂದಿಗೂ ಆಧಾರವಾಗಬಾರದು ಎಂದು ಅದು ಹೇಳಿದೆ.
ಅರ್ಜಿದಾರರು ಗರ್ಭಿಣಿಯಾಗಿದ್ದು, ಎತ್ತರ ಜಿಗಿತ, ಉದ್ದ ಜಿಗಿತ ಮತ್ತು ಓಟದಂತಹ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರಿಂದ ಆರ್‌ಪಿಎಫ್ ಪರೀಕ್ಷೆಯನ್ನು ಕೆಲ ತಿಂಗಳು ಮುಂದೂಡಬಹುದಿತ್ತು ಎಂದು ಪೀಠ ತಿಳಿಸಿದೆ.
ಇನ್ನು ಆರು ವಾರಗಳಲ್ಲಿ ಮಹಿಳೆಯ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಪರೀಕ್ಷೆಗೆ ಅಗತ್ಯವಾದ ದಾಖಲೆಗಳ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಆರ್‌ಪಿಎಫ್‌ಗೆ ನಿರ್ದೇಶಿಸಿದ್ದು ಆಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಹಿಂದಿನ ಸೇವಾ ಹಿರಿತನ ಮತ್ತಿತರ ಸೌಲಭ್ಯಗಳನ್ನು ನೀಡಿ ಕಾನ್‌ಸ್ಟೇಬಲ್ ಹುದ್ದೆಗೆ ನೇಮಿಸಿಕೊಳ್ಳುವಂತೆ ಅದು ತಾಕೀತು ಮಾಡಿದೆ. ಮಹಿಳೆ ಅರ್ಜಿ ಸಲ್ಲಿಸಿದ ಐದು ವರ್ಷಗಳ ಬಳಿಕ ಈ ಆದೇಶ ಹೊರಬಿದ್ದಿದೆ.
ಎಲ್ಲಾ ಅಧಿಕಾರಿಗಳು ಅದರಲ್ಲಿಯೂ ಸಾರ್ವಜನಿಕ ಹುದ್ದೆಗಳಲ್ಲಿರುವವರು ರಾಷ್ಟ್ರಕ್ಕೆ ಕೊಡುಗೆ ನೀಡಲು ಉತ್ಸುಕರಾಗಿರುವ ಮಹಿಳೆಯರಿಗೆ ಬೆಂಬಲ ನೀಡುವುದು ಅತ್ಯಗತ್ಯ ಎಂಬುದನ್ನು ಅರಿಯಬೇಕು ಮತ್ತು ಗರ್ಭಧಾರಣೆ ಇಲ್ಲವೇ ಇನ್ನಿತರ ಕಾರಣಗಳಿಗಾಗಿ ಅವರಿಗೆ ಇರುವ ಹಕ್ಕುಗಳನ್ನು ನಿರಾಕರಿಸುವಂತಿಲ್ಲ. ಗರ್ಭಾವಸ್ಥೆಯಂತಹ ಕಾರಣಗಳನ್ನು ಅಂಗವೈಕಲ್ಯ ಇಲ್ಲವೇ ಅನಾರೋಗ್ಯ ಎಂದು ಪರಿಗಣಿಸುವಂತಿಲ್ಲ ಎಂಬುದಾಗಿ ಅದು ನುಡಿದಿದೆ.
ವೃತ್ತಿಜೀವನದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಮಹಿಳೆಯ ಹಕ್ಕನ್ನು ಎಂದಿಗೂ ತಡೆಯಬಾರದು. ಹೆರಿಗೆಯನ್ನು ತಡೆಗೋಡೆಯಂತೆ ಗ್ರಹಿಸದೆ ಪ್ರತಿ ಮಹಿಳೆಯ ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಬೇಕು. ಗರ್ಭ ಧರಿಸಿರುವ ಮಹಿಳೆಯರ ವೃತ್ತಿಪರ ಆಕಾಂಕ್ಷೆಗಳನ್ನು ಪೂರೈಸುವ ಆಂತರಿಕ ವಾತಾವರಣ ಸೃಷ್ಟಿಸಲು ಎಲ್ಲಾ ಉದ್ಯೋಗದಾತರು ನಡೆಸುವ ಪ್ರತಿಯೊಂದು ಪ್ರಯತ್ನ ನಿರ್ಣಾಯಕವಾದದು ಎಂದು ಪೀಠ ಹೇಳಿದೆ
ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಮಹಿಳೆಯ ಅಭ್ಯರ್ಥಿತನ ತಿರಸ್ಕರಿಸಿದ್ದು ಸ್ವಲ್ಪವೂ ಸಮರ್ಥನೀಯವಲ್ಲ ಎಂದ ನ್ಯಾಯಾಲಯ ಅವರ ಆದೇಶವನ್ನು ರದ್ದುಗೊಳಿಸಿತು. ಅಷ್ಟೇ ಅಲ್ಲದೆ ನ್ಯಾಯಾಲಯ ಸರ್ಕಾರಕ್ಕೆ ₹ 1 ಲಕ್ಷ ದಂಡ ವಿಧಿಸಿತು. ಈ ದಂಡದ ಮೊತ್ತವನ್ನು ಹೈಕೋರ್ಟ್ ಕಟ್ಟಡದ ಛಾವಣಿಯೊಂದು ಕುಸಿದು ಗಾಯಗೊಂಡಿದ್ದ ಮಹಿಳೆಯೊಬ್ಬರಿಗೆ ಪಾವತಿಸುವಂತೆ ಅದು ಸೂಚಿಸಿತು.