ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯದ ದೂರು ದಾಖಲಿಸುವ ಭಿನ್ನಲಿಂಗೀಯ ಸಂಬಂಧದಲ್ಲಿರುವ ಲಿಂಗ ಪರಿವರ್ತಿತೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ವಿಶ್ವನಾಥನ್ ಕೃಷ್ಣ ಮೂರ್ತಿ ಮತ್ತು ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಮೂಲತಃ ಪುರುಷನಾಗಿದ್ದ ಲಿಂಗಪರಿವರ್ತಿತೆ ತನ್ನ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 498 ಎ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 4ರಡಿ ದೂರು ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೆಂಕಟ ಜ್ಯೋತಿರ್ಮಯಿ ಪ್ರತಾಪ ಅವರಿದ್ದ ಏಕಸದಸ್ಯ ಪೀಠ ಭಿನ್ನಲಿಂಗ ವಿವಾಹವಾಗಿರುವ ಲಿಂಗ ಪರಿವರ್ತಿತೆಗೆ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ರಕ್ಷಣೆ ಇರುತ್ತದೆ ಎಂದು ಸ್ಪಷ್ಟಪಡಿಸಿತು.
ತನ್ನ ಪತ್ನಿಯನ್ನು ಸಂಪೂರ್ಣ ಅರ್ಥದಲ್ಲಿ ಮಹಿಳೆ ಎಂದು ಪರಿಗಣಿಸಲು ಸಾಧ್ಯವಿಲ್ಲದಿರುವುದರಿಂದ ಆಕೆ ತನ್ನ ಹಾಗೂ ತನ್ನ ತಂದೆ ತಾಯಿ ವಿರುದ್ಧ ಐಪಿಸಿ ಸೆಕ್ಷನ್ 498ಎ ಅಡಿ ದೂರು ದಾಖಲಿಸುವಂತಿಲ್ಲ ಎಂದು ಪತಿ ವಾದಿಸಿದ್ದರು.
ಆದರೆ ಜೈವಿಕ ಸಂತಾನೋತ್ಪತ್ತಿಗೆ ಅಸಮರ್ಥಳಾಗಿರುವುದರಿಂದ ಲಿಂಗ ಪರಿವರ್ತಿತೆಯನ್ನು 'ಮಹಿಳೆ' ಎಂದು ಪರಿಗಣಿಸಬಾರದು ಎಂಬ ವಾದ ಆಳದಲ್ಲಿ ದೋಷಪೂರಿತವಾಗಿದ್ದು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದು ಪೀಠ ತಿಳಿಸಿದೆ
ಹೆಣ್ತನವನ್ನು ಸಂತಾನೋತ್ಪತ್ತಿಗೆ ಸೀಮಿತಗೊಳಿಸಿ ನೋಡುವ ಇಂತಹ ಸಂಕುಚಿತ ದೃಷ್ಟಿಕೋನ ಲಿಂಗತ್ವದ ಗುರುತನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಘನತೆ, ಗುರುತು ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ಸಂವಿಧಾನದ ಅಂತಃಸತ್ವವನ್ನೇ ಕಮರುವಂತೆ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
"ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕಾನೂನು ರಕ್ಷಣೆಯ ಉದ್ದೇಶಕ್ಕಾಗಿ ಲಿಂಗ ಪರಿವರ್ತಿತೆಗೆ 'ಮಹಿಳೆ' ಸ್ಥಾನಮಾನ ನಿರಾಕರಿಸುವುದು ಕೇವಲ ಆಕೆಯ ಸಂತಾನೋತ್ಪತ್ತಿ ಸಾಮರ್ಥ್ಯ ಇಲ್ಲವೆಂದು ತಾರತಮ್ಯ ಶಾಶ್ವತಗೊಳಿಸಿದಂತೆ. ಇದು ಸಂವಿಧಾನದ 14, 15 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಆದ್ದರಿಂದ, ಅಂತಹ ವಾದವನ್ನು ಆರಂಭದಲ್ಲಿಯೇ ತಿರಸ್ಕರಿಸಬೇಕು” ಎಂದಿತು.
ಸಲಿಂಗ ವಿವಾಹಕ್ಕೆ ಸುಪ್ರೀಂ ಕೋರ್ಟ್ ಕಾನೂನು ಮಾನ್ಯತೆ ನಿರಾಕರಿಸಿದರೂ, ದತ್ತು ಸ್ವೀಕಾರ, ಆರೋಗ್ಯ ರಕ್ಷಣೆ, ಉತ್ತರಾಧಿಕಾರ, ಪಿಂಚಣಿ ಮತ್ತು ಹಣಕಾಸು ಸೇವೆಗಳಂತಹ ಕ್ಷೇತ್ರಗಳಲ್ಲಿ ಲಿಂಗಪರಿವರ್ತಿತ ಜೋಡಿಗೆ ಸಮಾನ ಹಕ್ಕು ಒದಗಿಸು ಕ್ರಮ ಪರಿಶೀಲಿಸಿ ಶಿಫಾರಸು ಮಾಡಲು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಬಹುಮತದ ನಿರ್ದೇಶನ ನೀಡಿದೆ ಎಂಬುದನ್ನು ಗಮನಿಸುವುದು ಸೂಕ್ತ. ಭಿನ್ನಲಿಂಗೀಯ ಸಂಬಂಧಗಳಲ್ಲಿರುವ ಲಿಂಗಪರಿವರ್ತಿತ ವ್ಯಕ್ತಿಗಳು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂಬ ಗೌರವಾನ್ವಿತ ನ್ಯಾಯಾಲಯದ ಸ್ಪಷ್ಟೀಕರಣ, ಪ್ರಸ್ತುತ ಪ್ರಕರಣದಲ್ಲಿ ಆ ತೀರ್ಪನ್ನು ಅವಲಂಬಿಸಿ ಅರ್ಜಿದಾರರ ಪರ ವಕೀಲರು ಎತ್ತಿರುವ ವಾದವನ್ನು ಹೊಡೆದು ಹಾಕುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಆದರೆ ಪ್ರಕರಣವನ್ನು ಅರ್ಹತೆ ಆಧಾರದ ಮೇಲೆ ಪರಿಗಣಿಸಿದ ಹುರುಳಿಲ್ಲದ ಮತ್ತು ಅಸ್ಖಲಿತ ಆಪಾದನೆಗಳ ಹೊರತಾಗಿ ಕ್ರೌರ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಆರೋಪ ಪತಿಯ ವಿರುದ್ಧ ಇಲ್ಲ ಎಂದಿತು. ಅಂತೆಯೇ ಆರೋಪಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.
[ತೀರ್ಪಿನ ಪ್ರತಿ]