ದೋಷಿ ಎಂದು ತೀರ್ಪು ನೀಡುವ ಇಲ್ಲವೇ ಖುಲಾಸೆಗೊಳ್ಳುವ ಮೊದಲು ಅನೇಕ ವರ್ಷಗಳ ಕಾಲ ವಿಚಾರಣಾಧೀನ ಕೈದಿಗಳಾಗಿ ವ್ಯಕ್ತಿಗಳನ್ನು ಜೈಲಿನಲ್ಲಿರಿಸುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೈಲಿನಿಂದ ಬಿಡುಗಡೆಗೆ ಅರ್ಹರಾಗಿರುವ ಕೈದಿಗಳ ಗುರುತಿಸುವಿಕೆ ಮತ್ತು ಪರಿಶೀಲನೆಯನ್ನು ತ್ವರಿತಗೊಳಿಸುವ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
'ವಿಚಾರಣಾಧೀನರ ಪರಾಮರ್ಶನಾ ಸಮಿತಿ ವಿಶೇಷ ಆಂದೋಲನ- 2023' ಎಂಬ ಅಭಿಯಾನವನ್ನು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ- ನಾಲ್ಸಾ) ಕೈಗೆತ್ತಿಕೊಂಡಿದ್ದು ನಿನ್ನೆಯಿಂದ ಆರಂಭವಾಗಿರುವ ಅಭಿಯಾನ ನವೆಂಬರ್ 20ರವರೆಗೆ ಮುಂದುವರೆಯಲಿದೆ. ನ್ಯಾ. ಕೌಲ್ ನಾಲ್ಸಾದ ಕಾರ್ಯನಿರ್ವಹಣಾ ಅಧ್ಯಕ್ಷರಾಗಿದ್ದಾರೆ.
ವಕೀಲರನ್ನು ಪಡೆಯಲು ಸಾಧ್ಯವಾಗದ ಬಡವರು ಮತ್ತು ಅನಕ್ಷರಸ್ಥರು ವಿಚಾರಣಾಧೀನ ಕೈದಿಗಳಾಗಿ ಉಳಿಯುತ್ತಾರೆ. ಇದೇ ವೇಳೆ ವಕೀಲರನ್ನು ನೇಮಿಸಿಕೊಳ್ಳುವ ಶ್ರೀಮಂತರು ಸದಾ ಜಾಮೀನು ಪಡೆಯುತ್ತಾರೆ ಎಂದು ಅವರು ಹೇಳಿದರು.
“ಕಾನೂನು ಅಕ್ಷರಶಃ ಜಾರಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ತಾವು ಪಡೆಯಬಹುದಾದ ಕಾನೂನು ಪ್ರಾತಿನಿಧ್ಯದ ಗುಣಮಟ್ಟದ ಆಧಾರದ ಮೇಲೆ ಯಾರ ನಡುವೆಯೂ ತಾರತಮ್ಯ ಉಂಟಾಗದಂತೆ ನೋಡಿಕೊಳ್ಳುವುದು ನ್ಯಾಯಾಧೀಶರಾಗಿ ನಮ್ಮ ಜವಾಬ್ದಾರಿಯಾಗಿದೆ. ಈ ಹೊಣೆಗಾರಿಕೆ ಕಾನೂನು ಆಡಳಿತ ಮತ್ತು ನ್ಯಾಯ ಪಡೆಯುವಿಕೆಯ ಬುನಾದಿಯಾಗಿದೆ” ಎಂದು ಅವರು ತಿಳಿಸಿದರು.
ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಕಾರಾಗೃಹವಾಸದ ಪ್ರವೃತ್ತಿ ಆತಂಕಕಾರಿಯಾಗಿದ್ದು ಬಡ ಕೈದಿಗಳ ನಿರಂತರ ಬಂಧನ, ಅವರ ಕುಟುಂಬದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುವಂಥ ಅಪರಾಧ ನ್ಯಾಯ ವ್ಯವಸ್ಥೆಯ ತಿರುವುಗಳ ಬಗ್ಗೆ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ ಎಂದರು.