ತನಗೆ ನೀಡಲಾಗಿದ್ದ ಭದ್ರತಾ ಅನುಮತಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ವೈಮಾನಿಕ ಸರಕು ಸೇವೆ ಒದಗಿಸುವ ಟರ್ಕಿ ಮೂಲದ ಸೆಲೆಬಿ ಏರ್ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಶುಕ್ರವಾರ ಪ್ರಕರಣದ ತುರ್ತು ವಿಚಾರಣೆಗೆ ಕೋರಲಾಗಿದ್ದು ಸೋಮವಾರ (ಮೇ 19) ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಭಾರತ ಸರ್ಕಾರದ ನಿರ್ಧಾರ ಮನಸೋಇಚ್ಛೆಯಿಂದ ಕೂಡಿದ್ದು ಅದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ ಎಂದು ಟರ್ಕಿಯ ಸೆಲೆಬಿ ಏವಿಯೇಷನ್ ಹೋಲ್ಡಿಂಗ್‌ನ ಭಾರತೀಯ ಅಂಗಸಂಸ್ಥೆಯಾದ ಸೆಲೆಬಿ ಏರ್ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಾದಿಸಿರುವುದು ವರದಿಯಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಮೇ 15, 2025 ರಂದು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಸೆಲೆಬಿಯ ಭದ್ರತಾ ಅನುಮತಿ ಹಿಂತೆಗೆದುಕೊಂಡಿತು. ಇತ್ತೀಚಿನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಆರೋಪದಡಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿತ್ತು.
ಸಂಸ್ಥೆಯ ಪ್ರಮುಖ ತಕರಾರುಗಳು
ಕೇಂದ್ರ ಸರ್ಕಾರ ಪೂರ್ವಸೂಚನೆ ನೀಡದೆ ಕ್ರಮ ಕೈಗೊಂಡಿದ್ದು ಪ್ರತಿಕ್ರಿಯಿಸಲು ಅವಕಾಶ ನೀಡಿಲ್ಲ.
ಸರ್ಕಾರದ ಕ್ರಮಗಳು ಅಸ್ಪಷ್ಟ ಮತ್ತು ಆಧಾರರಹಿತವಾಗಿದ್ದು ಅಂತಹ ಕ್ರಮಗಳು ವಿದೇಶಿ ಹೂಡಿಕೆದಾರರ ವಿಶ್ವಾಸವನ್ನು ಅಪಾಯಕ್ಕೆ ಸಿಲುಕಿಸುತ್ತವೆ.
ಅಲ್ಲದೆ 3,800ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳ ಜೀವನೋಪಾಯಕ್ಕೆ ಅಪಾಯ ತಂದೊಡ್ಡಿದೆ.
ಕಂಪೆನಿ ಟರ್ಕಿ ಮೂಲದ್ದಾಗಿದ್ದರೂ ಅದನ್ನು ಭಾರತದಲ್ಲಿ ನಿರ್ವಹಿಸುತ್ತಿರುವುದು ಭಾರತ ಮೂಲದ ತಂಡ.
ಭದ್ರತಾ ಅನುಮತಿ ರದ್ದಾದ ಬಳಿಕ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ಸೆಲೆಬಿ ಜೊತೆಗಿನ ತನ್ನ ಒಪ್ಪಂದಗಳನ್ನು ರದ್ದುಗೊಳಿಸಿದ್ದು ಮುಂಬೈನಲ್ಲಿ, ದೇಶೀಯ ನಿರ್ವಾಹಕರಾದ ಇಂಡೋಥಾಯ್ ಸಂಸ್ಥೆ ನಿರ್ವಹಿಸುತ್ತಿದ್ದ ಸೇವೆಯ ಹೊಣೆ ನೀಡಲಾಗಿದೆ.