ಉಮರ್ ಖಾಲಿದ್ ಮತ್ತು ಸುಪ್ರೀಂ ಕೋರ್ಟ್ 
ಸುದ್ದಿಗಳು

ಎರಡೂ ಕಡೆಯ ವಕೀಲರ ಗೈರು: ಸುಪ್ರೀಂ ಕೋರ್ಟ್‌ನಲ್ಲಿ ಉಮರ್ ಖಾಲಿದ್ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

ಖಾಲಿದ್ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ದೆಹಲಿ ಪೊಲೀಸರ ಪರವಾಗಿ ಹಾಜರಾಗಬೇಕಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಇಬ್ಬರೂ ಗೈರಾಗಿದ್ದರು.

Bar & Bench

ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದೂಡಿದೆ [ಉಮರ್ ಖಾಲಿದ್ ವಿರುದ್ಧ ದೆಹಲಿ ಎನ್ಸಿಟಿ ರಾಜ್ಯ].

ಖಾಲಿದ್ ಪರ ವಾದಿಸಬೇಕಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ದೆಹಲಿ ಪೊಲೀಸರ ಪರವಾಗಿ ಹಾಜರಾಗಬೇಕಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಲಭ್ಯವಿಲ್ಲದ ಕಾರಣ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ವಿಚಾರಣೆ ಮುಂದೂಡಿತು.

ನ್ಯಾಯಪೀಠವು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಪ್ರಸ್ತಾಪಿಸಿತಾದರೂ ಸಿಬಲ್ ಅವರು ಸಾಂವಿಧಾನಿಕ ಪೀಠದ ಮುಂದೆ ವಾದಿಸುತ್ತಿರುವುದರಿಂದ, ನ್ಯಾಯಾಲಯ ಪ್ರಕರಣವನ್ನು ಜನವರಿಗೆ ಮುಂದೂಡಿದೆ.

ತಮಗೆ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ 2022ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪನ್ನು ಖಾಲಿದ್‌ ಸುಪ್ರೀಂ ಕೋರ್ಟ್‌ನಲ್ಲಿ  ಪ್ರಶ್ನಿಸಿದ್ದರು.

ಸೆಪ್ಟೆಂಬರ್ 2020ರಲ್ಲಿ ಅವರನ್ನು ಬಂಧಿಸಿದ್ದ ದೆಹಲಿ ಪೊಲೀಸರು ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಯುಎಪಿಎ ಕಾಯಿದೆ ಅಡಿಯಲ್ಲಿ ವಿವಿಧ ಆರೋಪ ದಾಖಲಿಸಿಕೊಂಡಿದ್ದರು. ಅಂದಿನಿಂದ ಖಾಲಿದ್‌ ಸೆರೆವಾಸ ಅನುಭವಿಸುತ್ತಿದ್ದಾರೆ.