Great Indian Bustard  Ai image
ಸುದ್ದಿಗಳು

ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆ: ವಿವಿಧ ಕ್ರಮಗಳಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

ತಜ್ಞರು ಶಿಫಾರಸು ಮಾಡಿದ ಸಂರಕ್ಷಣಾ ಕ್ರಮಗಳನ್ನು ಎರಡು ವರ್ಷಗಳೊಳಗೆ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ.

Bar & Bench

ವಿದ್ಯುತ್‌ ಮೂಲಸೌಕರ್ಯ ಮತ್ತು ವಾಸಸ್ಥಾನ ನಾಶದಿಂದಾಗಿ ಅಳಿವಿನಂಚಿನಲ್ಲಿರುವ ಹೆಬ್ಬಕ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಮತ್ತು ಲೆಸರ್‌ ಫ್ಲೋರಿಕನ್‌ ಹಕ್ಕಿಗಳ ಸಂರಕ್ಷಣೆಗಾಗಿ ವಿವಿಧ ಸಂರಕ್ಷಣಾ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ [ಎಂ ಕೆ ರಂಜಿತ್‌ ಸಿನ್ಹಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ನೂತನ ಗಾಳಿಯಂತ್ರಗಳಿಗೆ ನಿಷೇಧ, ಭೂಗತ ವಿದ್ಯುತ್ ಮಾರ್ಗ ಬಳಕೆ ಸೇರಿದಂತೆ ಎಲ್ಲಾ ಪ್ರಮುಖ ಕ್ರಮಗಳನ್ನು ಎರಡು ವರ್ಷಗಳ ಒಳಗೆ ಜಾರಿಗೆ ತರುವಂತೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಎ ಎಸ್  ಚಂದೂರ್‌ಕರ್‌ ಅವರಿದ್ದ ಪೀಠ ಆದೇಶಿಸಿತು.

ಪ್ರಕರಣ ಕೇವಲ ಒಂದು ಜಾತಿಯ ಬದಲಾಗಿ ಪರಿಸರ ಸಂರಕ್ಷಣೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಬಳಕೆಯನ್ನು ಸಮನ್ವಯಗೊಳಿಸುವ ಕುರಿತಾದದ್ದು ಎಂದು ನ್ಯಾಯಾಲಯ ಹೇಳಿತು. ಒಂದನ್ನು ಮತ್ತೊಂದಕ್ಕೆ ಬಲಿ ಕೊಡದೆ ಎರಡೂ ಗುರಿಗಳನ್ನು ಸಾಕಾರಗೊಳಿಸಬೇಕು ಎಂದು ಅದು ನುಡಿಯಿತು.

ಒಂದು ಕಾಲದಲ್ಲಿ ದೇಶದ ಬಹುಭಾಗಗಳಲ್ಲಿ ಕಂಡುಬರುತ್ತಿದ್ದ ಹೆಬ್ಬಕ ಈಗ ರಾಜಸ್ಥಾನ ಮತ್ತು ಗುಜರಾತ್‌ನ ಕೆಲವೇ ಪ್ರದೇಶಗಳಲ್ಲಿ ಮಾತ್ರ ಉಳಿದಿದ್ದು, ಅದರ ಸಂಖ್ಯೆ 250ಕ್ಕೂ ಕಡಿಮೆ ಇದೆ. 2019ರಲ್ಲಿ ಸಲ್ಲಿಸಲಾದ ಅರ್ಜಿ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ  ಪೀಠ, 2021ರಲ್ಲಿ ಭೂ ಮೇಲ್ಮೈ ವಿದ್ಯುತ್ ಪ್ರಸರಣ ಮಾರ್ಗಗಳ ಮೇಲೆ ವ್ಯಾಪಕ ನಿರ್ಬಂಧ ವಿಧಿಸಿತ್ತು. ಆದರೆ ಇವು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಅಡ್ಡಿಯಾಗಬಹುದು ಎಂದು ಕೇಂದ್ರ ಸರ್ಕಾರ ವಾದಿಸಿದ ಹಿನ್ನೆಲೆಯಲ್ಲಿ  2024ರಲ್ಲಿ ನ್ಯಾಯಾಲಯ ತನ್ನ ಆದೇಶವನ್ನು ಮರುಪರಿಶೀಲಿಸಿ ಸಮತೋಲನದಿಂದ ಕೂಡಿರುವ ಪರಿಹಾರ ಕೋರಿ ತಜ್ಞರ ಸಮಿತಿ  ರಚಿಸಿತ್ತು.

ತಜ್ಞ ಸಮಿತಿಯು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಪರಿಶೀಲನೆ ನಡೆಸಿ ಪರಿಷ್ಕೃತ ಆದ್ಯತಾ ಸಂರಕ್ಷಣಾ ಪ್ರದೇಶಗಳನ್ನು ಗುರುತಿಸಿದೆ. ಅದರಂತೆ, ರಾಜಸ್ಥಾನದಲ್ಲಿ 14,013 ಚ.ಕಿ.ಮೀ. ಮತ್ತು ಗುಜರಾತ್‌ನಲ್ಲಿ 740 ಚ.ಕಿ.ಮೀ. ಪ್ರದೇಶಗಳನ್ನು ಹೆಬ್ಬಕ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಘೋಷಿಸಲಾಗಿದೆ.

 ರಾಜಸ್ಥಾನದಲ್ಲಿ 33 ಕಿ.ವಿ. ಸಾಮರ್ಥ್ಯದ 80 ಕಿ.ಮೀ. ಮತ್ತು ಗುಜರಾತ್‌ನಲ್ಲಿ 79 ಕಿ.ಮೀ. ವಿದ್ಯುತ್ ಲೈನ್‌ಗಳನ್ನು ಭೂಗತಗೊಳಿಸುವುದು, ಹಲವು 66 ಕಿ.ವಿ. ಲೈನ್‌ಗಳನ್ನು ಮರುಮಾರ್ಗಗೊಳಿಸುವುದು, ಹಾಗೂ ಆದ್ಯತಾ ಪ್ರದೇಶಗಳೊಳಗೆ 2 ಮೆಗಾವಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಹೊಸ ಗಾಳಿಯಂತ್ರಗಳು ಅಥವಾ ಸೌರ ಉದ್ಯಾನಗಳಿಗೆ ಸಂಪೂರ್ಣ ನಿಷೇಧ ವಿಧಿಸುವುದು ಜೊತೆಗೆ, ವನ್ಯಜೀವಿ ಸಂಸ್ಥೆ ಗುರುತಿಸಿರುವ 250 ಕಿ.ಮೀ. ಉಚ್ಚ ಅಪಾಯದ ವಿದ್ಯುತ್ ಲೈನ್‌ಗಳನ್ನು ಎರಡು ವರ್ಷಗಳೊಳಗೆ ಭೂಗತಗೊಳಿಸುವುದ ಸೇರಿದಂತೆ ಸಮಿತಿ ಸೂಚಿಸಿದ್ದ ಪ್ರಮುಖ ಕ್ರಮಗಳ ಜಾರಿಗೆ ಸಮ್ಮತಿಸಿದೆ.

ಪರಿಸರ ಸಂರಕ್ಷಣೆ ಕೇವಲ ಔದಾರ್ಯದ ಸಂಗತಿಯಲ್ಲ, ಸಾಂವಿಧಾನಾತ್ಮಕ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ. ಕಂಪೆನಿಗಳ ಕಾಯಿದೆಯಡಿ ಕಾರ್ಪೊರೇಟ್‌ ಸಾಮಾಜಿಕ ಹಿಣೆಗಾರಿಕೆ ಭಾಗವಾಗಿ ಪರಿಸರ ಸಂರಕ್ಷಣೆಯನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ಹೆಬ್ಬಕಗಳ ಸಂರಕ್ಷಣೆಗಾಗಿ ರಾಜಸ್ಥಾನದ ಬಿಷ್ಣೋಯಿ ಸಮುದಾಯದ ಪರಂಪರಾನುಗತ ಪಾತ್ರವನ್ನು ನ್ಯಾಯಾಲಯ ಪ್ರಶಂಸಿಸಿತು.

ಅಂತಿಮವಾಗಿ, ತಜ್ಞ ಸಮಿತಿಯ ಶಿಫಾರಸುಗಳನ್ನು ಎರಡು ವರ್ಷಗಳೊಳಗೆ ಜಾರಿಗೆ ತರಲು ಮೇಲ್ವಿಚಾರಣೆ ನಡೆಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಅದು ನಿರ್ದೇಶನ ನೀಡಿದ್ದು, ಪರಿಸರ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಎರಡನ್ನೂ ಸಮತೋಲನದಿಂದ ಮುಂದುವರಿಸಬೇಕು ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ಪ್ರಶಾಂತೋ ಚಂದ್ರ ಸೇನ್ ಮತ್ತವರ ಕಾನೂನು ತಂಡ, ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ಪ್ರತಿವಾದಿಗಳ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ, ಹಿರಿಯ ವಕೀಲರಾದ ರುಚಿ ಕೊಹ್ಲಿ, ಮನೀಶ್‌ ಸಿಂಘ್ವಿ, ರಂಜಿ ಥಾಮಸ್‌ ವಾದ ಮಂಡಿಸಿದರು.

[ತೀರ್ಪಿನ ಪ್ರತಿ]

MK_Ranjitsinh___Ors__vs__Union_of_India___Ors__.pdf
Preview