Demolitions, Supreme Court 
ಸುದ್ದಿಗಳು

ಥಾಣೆಯ 17 ಅಕ್ರಮ ಕಟ್ಟಡಗಳ ನೆಲಸಮ ಆದೇಶ ಎತ್ತಿಹಿಡಿದ ಸುಪ್ರೀಂ: ಭೂಗತ ಲೋಕದ ಕೈವಾಡದ ಬಗ್ಗೆ ಪ್ರಸ್ತಾಪ

ಭೂಗತ ಲೋಕದ ನಂಟಿರುವ ಬಿಲ್ಡರ್‌ಗಳ ನೆರವಿನೊಂದಿಗೆ ನಡೆದ ಅತಿಕ್ರಮಣದ ವಿರುದ್ಧ ಆದೇಶ ಹೊರಡಿಸಿದ ಬಾಂಬೆ ಹೈಕೋರ್ಟನ್ನು ನ್ಯಾಯಾಲಯ ಈ ವೇಳೆ ಶ್ಲಾಘಿಸಿತು.

Bar & Bench

ಭೂಗತ ಲೋಕದೊಂದಿಗೆ ನಂಟು ಹೋಂದಿರುವ ಬಿಲ್ಡರ್‌ಗಳು ಅತಿಕ್ರಮಣ ಮಾಡಿದ ಭೂಮಿಯಲ್ಲಿ ನಿರ್ಮಿಸಲಾದ 17 ಅನಧಿಕೃತ ಕಟ್ಟಡಗಳನ್ನು ಕೆಡವಲು ಥಾಣೆ ಪಾಲಿಕೆಗೆ ನಿರ್ದೇಶಿಸಿ ಬಾಂಬೆ ಹೈಕೋರ್ಟ್ ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ಡ್ಯಾನಿಶ್ ಜಹೀರ್ ಸಿದ್ದಿಕಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಹೈಕೋರ್ಟ್ ಆದೇಶದಿಂದ ತೊಂದರೆಗೊಳಗಾದ 400 ಕುಟುಂಬಗಳ ಪರವಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದ ಈ ಕಟ್ಟಡಗಳಲ್ಲಿರುವ ಫ್ಲಾಟ್ ಖರೀದಿಸಿದವರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ವಜಾಗೊಳಿಸಿತು.

ಹೈಕೋರ್ಟ್ ಸೂಕ್ತ ಆದೇಶವನ್ನೇ ನೀಡಿದ್ದು ಈ ಹಂತದಲ್ಲಿ ಯಾವುದೇ ಸವಾಲನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದಾಗಿ ಪೀಠ ತಿಳಿಸಿತು.

ಅಲ್ಲದೆ ಭೂಗತ ಲೋಕದ ನಂಟಿರುವ ಬಿಲ್ಡರ್‌ಗಳ ನೆರವಿನೊಂದಿಗೆ ನಡೆದ ಅತಿಕ್ರಮಣದ ವಿರುದ್ಧ ಆದೇಶ ಹೊರಡಿಸಿದ ಬಾಂಬೆ ಹೈಕೋರ್ಟನ್ನು ನ್ಯಾಯಾಲಯ ಈ ವೇಳೆ ಶ್ಲಾಘಿಸಿತು.

ಅರ್ಜಿ ಸೂಕ್ತ ದಾಖಲೆಗಳಿಲ್ಲದೆ ಅಥವಾ ಭೂಮಿಯ ಹಕ್ಕು ಇಲ್ಲವೇ ಅನುಮತಿಗಳ ಪರಿಶೀಲನೆ ನಡೆಸದೆ ಫ್ಲಾಟ್ ಖರೀದಿಸಿದ್ದು ಹೇಗೆ ಎಂದು ಅದು ಪ್ರಶ್ನಿಸಿತು.

ಮನೆ ಖರೀದಿದಾರರನ್ನು ಮೊಕದ್ದಮೆಯಲ್ಲಿ ಬಿಲ್ಡರ್‌ಗಳು ಗುರಾಣಿಯಾಗಿ ಬಳಸಿದ್ದಾರೆ ಎನ್ನಲಾದ ತಂತ್ರದ ಬಗ್ಗೆ ಪ್ರತಿಕ್ರಿಯಿಸಿದ ಅದು ಇದೆಲ್ಲದರ ಹಿಂದೆ ಭೂಗತ ಲೋಕ ಇದೆ ಎಂದಿತು.

ತನ್ನ ಭೂಮಿ ಅತಿಕ್ರಮಿಸಿ ಬಿಲ್ಡರ್ ಗಳು ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು‌ ಮಹಿಳೆಯೊಬ್ಬರು ಹೈಕೋರ್ಟ್ ಗೆ ಈ ಹಿಂದೆ ದೂರು ಸಲ್ಲಿಸಿದ್ದರು. ವಾದ ಆಲಿಸಿದ್ದ ಉಚ್ಚ ನ್ಯಾಯಾಲಯ ಕಟ್ಟಡಗಳ ನೆಲಸಮಕ್ಕೆ ಆದೇಶಿಸಿತ್ತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಅವರು, ಇಂತಹ ಅನಧಿಕೃತ ನಿರ್ಮಾಣ ಮುಂದುವರಿಸುವುದರಿಂದ ಯಾವುದೇ ನಗರಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು.

ಅಂತಿಮವಾಗಿ, ಅರ್ಜಿದಾರರ ಪರ ಹಾಜರಿದ್ದ ವಕೀಲರು ಮನವಿ ಹಿಂಪಡೆಯಲು ಮತ್ತು ಬಿಲ್ಡರ್ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಲು ಸ್ವಾತಂತ್ರ್ಯ ಕೋರಿರುವುದನ್ನು ನ್ಯಾಯಾಲಯ ದಾಖಲಿಸಿಕೊಂಡಿತು.