ವಿಚಿತ್ರ ಘಟನೆಯೊಂದರಲ್ಲಿ ಕಳ್ಳತನ ಪ್ರಕರಣದ ಉದ್ಘೋಷಣೆಯಲ್ಲಿ ಅಪರಾಧಿಯ ಹೆಸರಿನ ಬದಲು ನ್ಯಾಯಾಧೀಶರೊಬ್ಬರ ಹೆಸರನ್ನು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ʼಕಣ್ಮುಚ್ಚಿʼ ಬರೆದಿದ್ದಾರೆ
ತಲೆ ಮರೆಸಿಕೊಂಡಿರುವ ಆರೋಪಿ ರಾಜಕುಮಾರ್‌ನನ್ನು ಪತ್ತೆಹಚ್ಚುವ ಬದಲು ಸಬ್-ಇನ್ಸ್ಪೆಕ್ಟರ್ ಬನ್ವರಿಲಾಲ್ ಅವರು, ಆರೋಪಿಯನ್ನು ಪತ್ತೆಹಚ್ಚುವಂತೆ ಆದೇಶಿಸಿದ್ದ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನಗ್ಮಾ ಖಾನ್ ಅವರ ಶೋಧ ಕಾರ್ಯದ ಉದ್ಘೋಷಣೆ ಹೊರಡಿಸಿದ್ದರು.
ಸಬ್-ಇನ್‌ಸ್ಪೆಕ್ಟರ್ ತೋರಿದ ನಿರ್ಲಕ್ಷ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಉದ್ಘೋಷಣಾ ಪ್ರಕಟಣೆ ಬರೆಯುವ ಕ್ರಿಮಿನಲ್ ಕಾರ್ಯವಿಧಾನದ ಬಗ್ಗೆ ಪೊಲೀಸ್ ಅಧಿಕಾರಿಗೆ ಮೂಲಭೂತ ಜ್ಞಾನವಿಲ್ಲ ಎಂದು ಹೇಳಿತು.
"ಸಂಬಂಧಿತ ಪೊಲೀಸ್ ಠಾಣೆಯ ಸೇವೆಯಲ್ಲಿರುವ ಅಧಿಕಾರಿಗೆ ಈ ನ್ಯಾಯಾಲಯ ಏನನ್ನು ಕಳುಹಿಸಿದೆ, ಯಾರು ನಿಖರವಾಗಿ ಕಳುಹಿಸಿದ್ದಾರೆ ಮತ್ತು ಯಾರ ವಿರುದ್ಧ ಕಳುಹಿಸಿದ್ದಾರೆ ಎಂಬುದರ ಬಗ್ಗೆ ಸ್ವಲ್ಪವೂ ಪರಿಜ್ಞಾನ ಇಲ್ಲ ಎಂಬುದು ತುಂಬಾ ವಿಚಿತ್ರವಾಗಿದೆ. ಸಿಆರ್‌ಪಿಸಿ ಸೆಕ್ಷನ್ 82ರ ಅಡಿಯಲ್ಲಿ ಹೊರಡಿಸಲಾದ ಉದ್ಘೋಷಣೆಯನ್ನು ಪಾಲಿಸಬೇಕಿದ್ದ ಸಂಬಂಧಿತ ಪೊಲೀಸ್ ಠಾಣೆಯ ಸೇವೆಯಲ್ಲಿರುವ ಅಧಿಕಾರಿಗೆ ಉದ್ಘೋಷಣೆಯಲ್ಲಿ ಏನು ಕೇಳಲಾಗಿದೆ ಎಂಬುದರ ಬಗ್ಗೆ ಮೂಲಭೂತ ಜ್ಞಾನದ ಕೊರತೆ ಇದೆ ಎಂದು ತೋರುತ್ತದೆ" ಎಂದು ನ್ಯಾಯಾಧೀಶೆ ನಗ್ಮಾ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.
ಸಿಆರ್‌ಪಿಸಿ ಸೆಕ್ಷನ್ 82ರ ಅಡಿಯಲ್ಲಿ, ಆರೋಪಿ ಪರಾರಿಯಾಗಿದ್ದಾನೆ ಅಥವಾ ತಲೆಮರೆಸಿಕೊಂಡಿದ್ದಾನೆ ಎಂದು ನಂಬಲು ಕಾರಣವಿದ್ದರೆ, ಬಂಧನ ವಾರಂಟ್ ಜಾರಿ ಸಾಧ್ಯವಾಗದಿದ್ದರೆ ಆಗ ನ್ಯಾಯಾಲಯ ಆರೋಪಿಗೆ ತನ್ನ ಮುಂದೆ ಹಾಜರಾಗುವಂತೆ ಉದ್ಘೋಷಣೆ ಹೊರಡಿಸುತ್ತದೆ. ಈ ನಿಬಂಧನೆಯಡಿಯಲ್ಲಿ, ಮ್ಯಾಜಿಸ್ಟ್ರೇಟ್ ನಗ್ಮಾ ಖಾನ್ ಅವರು ಆರೋಪಿ ರಾಜ್‌ಕುಮಾರ್ ಅಲಿಯಾಸ್ ಪಪ್ಪು ವಿರುದ್ಧ ಉದ್ಘೋಷಣೆ ಹೊರಡಿಸಿದ್ದರು.
ಆದರೆ, ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿ ಉದ್ಘೋಷಣೆ ಹೊರಡಿಸಿದ ನ್ಯಾಯಾಧೀಶರನ್ನೇ ಪ್ರಕರಣದ ಆರೋಪಿಯನ್ನಾಗಿ ಮಾಡಿದ್ದಾರೆ. ಅಲ್ಲದೆ ಅವರು ಉದ್ಘೋಷಣೆಯನ್ನು ಜಾಮೀನು ರಹಿತ ವಾರಂಟ್ ಎಂದು ತಪ್ಪಾಗಿ ಉಲ್ಲೇಖಿಸಿದ್ದು ನ್ಯಾಯಾಧೀಶರ ಹೆಸರನ್ನು ಒಂದಿನಿತೂ ಗಮನಿಸದೆ ಬರೆದಿದ್ದರು.
ಮಾರ್ಚ್ 23 ರಂದು ಪ್ರಕರಣವನ್ನು ವಿಚಾರಣೆಗೆ ಕರೆದು, ಕಡತವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಈ ವ್ಯತ್ಯಾಸ ನ್ಯಾಯಾಲಯದ ಗಮನಕ್ಕೆ ಬಂದಿತ್ತು.
"ಆರೋಪಿ ನಗ್ಮಾ ಖಾನ್ ಅವರನ್ನು ಹುಡುಕಲು ಹೋದಾಗ ಅವರು ಅವರ ನಿವಾಸದಲ್ಲಿ ಪತ್ತೆಯಾಗಿಲ್ಲ" ಎಂದು ಸಬ್-ಇನ್ಸ್‌ಪೆಕ್ಟರ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಹೀಗಾಗಿ ಆರೋಪಿ (ನ್ಯಾಯಾಧೀಶರು) ವಿರುದ್ಧ ಆದೇಶ ಹೊರಡಿಸುವಂತೆ ಮ್ಯಾಜಿಸ್ಟ್ರೇಟ್ ನಗ್ಮಾ ಖಾನ್ ಅವರನ್ನು ಕೋರಿದ್ದರು.
ಉದ್ಘೋಷಣೆ ಹೊರಡಿಸುವ ವಿಧಾನ ಮತ್ತು ಜಾಮೀನು ರಹಿತ ವಾರಂಟ್ ಬಗ್ಗೆ ಇನ್‌ಸ್ಪೆಕ್ಟರ್ ಗೊಂದಲಕ್ಕೊಳಗಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ಈ ಗಂಭೀರ ದೋಷ ಪೊಲೀಸ್ ಅಧಿಕಾರಿಯಾಗಿ ಅವರ ಕೆಲಸವನ್ನು ಕೆಟ್ಟದಾಗಿ ಬಿಂಬಿಸುತ್ತದೆ. ಏಕೆಂದರೆ ಅವರಿಗೆ ವಹಿಸಲಾದ ಕರ್ತವ್ಯಗಳ ಬಗ್ಗೆ ಅವರಿಗೆ ಏನೇನೂ ತಿಳಿದಿಲ್ಲ. ಪ್ರಕ್ರಿಯೆ ಕುರಿತು ಒಂದಿಚೂ ಗಮನ ಕೊಡದೆ ಅವರು ಮೊದಲು ಅಜಾಗರೂಕತೆಯಿಂದ ಉದ್ಘೋಷಣೆಯನ್ನು ಜಾಮೀನು ರಹಿತ ವಾರೆಂಟ್ ಎಂದು ಉಲ್ಲೇಖಿಸಿದರು. ನಂತರ ನ್ಯಾಯಾಧೀಶರ ಹೆಸರನ್ನು (ಆರೋಪಿಯ ಹೆಸರನ್ನು ಬರೆಯಬೇಕಿದ್ದ ಜಾಗದಲ್ಲಿ) ಕುರುಡಾಗಿ ಬರೆದರು ಎಂದು ಅದು ಖಂಡಿಸಿತು.
ಇದನ್ನು ಇನ್ಸ್‌ಪೆಕ್ಟರ್ ಅವರ ಕರ್ತವ್ಯ ಲೋಪ ಎಂದ ನ್ಯಾಯಾಲಯ, ಅಂತಹ ನಿರ್ಲಕ್ಷ್ಯದ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅದು ಪ್ರತಿಯೊಬ್ಬರ ಮೂಲಭೂತ ಹಕ್ಕುಗಳ ಮೇಲೆ ಅಡ್ಡಿ ಉಂಟುಮಾಡುತ್ತದೆ ಎಂದು ನುಡಿಯಿತು. ಆದ್ದರಿಂದ, ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ, ಇನ್‌ಸ್ಪೆಕ್ಟರ್ ಅವರ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]