ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೆ. ಅರ್ಜುನ್ ಹೊರಕೇರಿ ಅವರ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ಮೇಲ್ಮನವಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತು.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಹಿಂದೆ ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕೂಡ ಅರ್ಜುನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜುನ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜುನ್ ಅವರ ಪರವಾಗಿ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ವಾದಿಸಿದ್ದರು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸಂತ್ರಸ್ತ ಯುವಕ ಕೆ ಎಲ್ ಪುನೀತ್ ಅವರನ್ನು ವಕೀಲರಾದ ಮೊಹಮ್ಮದ್ ಆಸೀಫ್ ಸಾದುಲ್ಲಾ, ಎಸ್. ಶಿವಮಣಿದನ್ ಹಾಗೂ ಬಸವಪ್ರಸಾದ್ ಕುನಾಲೆ ಪ್ರತಿನಿಧಿಸಿದ್ದರು.
ಪ್ರಕರಣದ ಹಿನ್ನೆಲೆ:
ಪುನೀತ್ ಈ ಹಿಂದೆ ವಿವರಿಸಿರುವಂತೆ ಮೇ 10ರಂದು ಬೆಳಿಗ್ಗೆ ಕೆಲವರು ಅವರ ಮನೆ ಬಳಿ ಬಂದು ʼಮಹಿಳೆಗೆ ಫೋನ್ ಮಾಡಿದ್ದೀಯಾ. ನಿನ್ನ ಬಳಿ ಮಾತನಾಡಬೇಕು ಬಾʼ ಎಂದು ಕರೆದಿದ್ದರು. ಅವರು ತುಂಬಾ ಜನ ಇದ್ದುದರಿಂದ ಜೊತೆಯಲ್ಲಿ ತೆರಳಲು ಪುನೀತ್ ನಿರಾಕರಿಸಿದ್ದರು. ನಿರಾಕರಿಸಿದೆ. ಅವರು ಬಳಿಕ ಪುನೀತ್ ಮನೆ ಸುತ್ತುವರೆದಿದ್ದರು. ರಕ್ಷಣೆಗಾಗಿ 112ಕ್ಕೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿ ಗೋಣಿಬೀಡು ಠಾಣೆ ಪಿಎಸ್‌ಐ ಅರ್ಜುನ್‌ಗೆ ಕರೆ ಮಾಡಿದರು. ಪಿಎಸ್‌ಐ ಬಂದು ಯಾವುದೇ ವಿಚಾರಣೆ ಮಾಡದೆ ಜೀಪ್ ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು ಠಾಣೆಗೆ ಕೊರೆದೊಯ್ದರು. ಠಾಣೆಯಲ್ಲಿ ಪುನೀತ್ ಅವರ ಬಟ್ಟೆ ಬಿಚ್ಚಿಸಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ತೊಡೆಯ ಹತ್ತಿರ ಕಬ್ಬಿಣದ ರಾಡ್ ಇರಿಸಿ ಮನಬಂದಂತೆ ಹೊಡೆದು ಎಷ್ಟು ದಿನದಿಂದ ಮಹಿಳೆ ಜೊತೆ ಸಂಬಂಧ ಇತ್ತೆಂದು ಕೇಳಿದರು.
ಆಗ ಪುನೀತ್ “ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್‌ನಲ್ಲಿ ಮಾತನಾಡಿದ್ದೆ. ಆ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು. ನಂತರ ಫೋನ್ ಮಾಡಿಲ್ಲ ಎಂದೆ” ಎಂಬುದಾಗಿ ತಿಳಿಸಿದ್ದರು. ಇದನ್ನು ಒಪ್ಪದ ಅರ್ಜುನ್ ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ್ದರು ಎಂದು ಆರೋಪಿಸಲಾಗಿತ್ತು.
ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಪಿಎಸ್‌ಐ ಅರ್ಜುನ್ ಅವರನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿದ್ದವು. ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಸಬ್‌ಇನ್ಸ್‌ಪೆಕ್ಟರ್ ಅರ್ಜುನ್ ಅವರನ್ನು ಬಂಧಿಸಿ ಜೈಲಿಗೆ ಕಳಿಸುವಂತೆ ಆಗ್ರಹಿಸಿದ್ದರು.
ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಗೋಣಿಬೀಡು ಠಾಣೆಗೆ ಭೇಟಿ ನೀಡಿ ಘಟನೆ ಸಂಬಂಧ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ ಪುನೀತ್ ಅವರ ಜೊತೆಗೂ ಮಾತುಕತೆ ನಡೆಸಿದ್ದರು. ಇತ್ತ ಯುವಕ ಪುನೀತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಮಹಿಳೆ ಕೂಡ ದೂರು ನೀಡಿದ್ದರು. ತನ್ನ ಸಂಸಾರ ಹಾಳಾಗುವುದಕ್ಕೆ ಪುನೀತ್ ಕಾರಣ. ತನ್ನ ಜೊತೆ ಬರುವಂತೆ ಪುನೀತ್ ಒತ್ತಾಯಿಸುತ್ತಿದ್ದರು. ಪುನೀತ್ ಪ್ರಕರಣ ಬಯಲಾದ ಬಳಿಕ ನನ್ನ ವಿಚಾರ ಎಲ್ಲರಿಗೂ ಗೊತ್ತಾಗಿ ನನ್ನ ಮಾನ ಹಾಳಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು. ಮಹಿಳೆ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್‌ಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈ ಹಿಂದೆ ಜಾಮೀನು ನೀಡಿತ್ತು.