ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅಗತ್ಯ ಅಂಶವಲ್ಲ. ಅದಕ್ಕೆ ಅನುಮತಿ ನಿರಾಕರಿಸಿರುವುದರಿಂದ ಯಾವುದೇ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ [ಜಾಗೋ ನೆಹರು ನಗರ ನಿವಾಸಿಗಳ ಕಲ್ಯಾಣ ಸಂಘ ಮತ್ತು ಪೊಲೀಸ್ ಆಯುಕ್ತರ ನಡುವಣ ಪ್ರಕರಣ].
ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮಾವಳಿ- 2000 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಮುಂಬೈ ಪೊಲೀಸರಿಗೆ ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಶ್ಯಾಮ್ ಚಂದಕ್ ಅವರಿದ್ದ ಪೀಠವು ನಿರ್ದೇಶನ ನೀಡಿತು.
"ಶಬ್ದ ಎಂಬುದು ವಿವಿಧ ಕಾರಣಗಳಿಂದಾಗಿ ಆರೋಗ್ಯದ ಮೇಲೆ ತೀವ್ರ ಅಪಾಯ ಉಂಟು ಮಾಡುತ್ತದೆ. ಧ್ವನಿವರ್ಧಕವನ್ನು ಬಳಸಲು ಅನುಮತಿ ನಿರಾಕರಿಸುವುದು ತನ್ನ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ ಎಂದು ಯಾರೊಬ್ಬರೂ ಹಕ್ಕುಸಾಧಿಸಲಾಗದು. ಸಾರ್ವಜನಿಕ ಹಿತಾಸಕ್ತಿಯಿಂದ ಅಂತಹ ಅನುಮತಿ ನೀಡಬಾರದು. ಅನುಮತಿ ನಿರಾಕರಿಸುವುದರಿಂದ ಸಂವಿಧಾನದ 19 ಅಥವಾ 25ರ ಉಲ್ಲಂಘನೆಯಾಗುವುದಿಲ್ಲ. ಧ್ವನಿವರ್ಧಕಗಳ ಬಳಕೆ ಮಾಡುವುದು ಯಾವುದೇ ಧರ್ಮದ ಅಗತ್ಯ ಭಾಗವಲ್ಲ" ಎಂದು ನ್ಯಾಯಾಲಯ ಹೇಳಿದೆ.
ಶಬ್ದ ಮಾಲಿನ್ಯದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಸೀದಿಗಳು ಮತ್ತು ಮದರಸಾಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಮುಂಬೈನ ಕುರ್ಲಾ ಮತ್ತು ಚುನಾಭಟ್ಟಿ ಪ್ರದೇಶಗಳಲ್ಲಿನ ನಿವಾಸಿಗಳ ಎರಡು ಕ್ಷೇಮಾಭಿವೃದ್ಧಿ ಸಂಘಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ಆಜಾನ್ ಮತ್ತು ಧಾರ್ಮಿಕ ಪ್ರವಚನಗಳಿಗೆ ಧ್ವನಿವರ್ಧಕಗಳನ್ನು ಬಳಸುವುದರಿಂದ ಶಬ್ದದ ಮಟ್ಟ ಎಲ್ಲೆ ಮೀರುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶದ ಶಾಂತಿ ಕದಡುತ್ತದೆ. ಈ ಸಂಬಂಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ನಿರ್ಲಕ್ಷ್ಯ ಶಬ್ದ ಮಾಲಿನ್ಯ ನಿಯಮಗಳ ಉಲ್ಲಂಘನೆಯಾಗಿದ್ದು ಧ್ವನಿವರ್ಧಕ ಬಳಕೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಎಫ್‌ಐಆರ್ ದಾಖಲಿಸಿಕೊಳ್ಳುವುದಕ್ಕೆ ನಿರ್ದೇಶನ ನೀಡುವುದಿಲ್ಲ ಬದಲಿಗೆ ಧಾರ್ಮಿಕ ಸ್ಥಳಗಳಲ್ಲಿ ಬಳಸುವ ಧ್ವನಿವರ್ಧಕಗಳ ಡೆಸಿಬಲ್ ಮಟ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯವಿಧಾನ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಮಾರ್ಗಸೂಚಿಗಳನ್ನು ನೀಡಿತು.
ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ: