ಶಬ್ದ ಮಾಲಿನ್ಯಕ್ಕೆ ಜಿಲ್ಲಾಧಿಕಾರಿ, ಎಸ್‌ಪಿ ಹೊಣೆ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಹರಿಯಾಣ, ಪಂಜಾಬ್ ಮತ್ತು ಚಂಡೀಗಢದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಾಗರೂಕರಾಗಿರಬೇಕು ಮತ್ತು ಶಬ್ದ ಮಾಲಿನ್ಯ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ತ್ವರಿತ ಕ್ರಮ ಕೈಗೊಳ್ಳಬೇಕು ನ್ಯಾಯಾಲಯ ಸೂಚಿಸಿದೆ.
Noise Pollution
Noise Pollution
Published on

ಶಬ್ದ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 2019ರಲ್ಲಿ ತಾನು ನೀಡಿದ್ದ ನಿರ್ದೇಶನ ಜಾರಿಗೊಳಿಸದಿದ್ದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಖುದ್ದು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈಚೆಗೆ ಎಚ್ಚರಿಕೆ ನೀಡಿದೆ [ಅಭಿಲಾಕ್ಷ ಸಚ್‌ದೇವ್‌ ಮತ್ತು ಹರಿಯಾಣ ಸರ್ಕಾರ ನಡುವಣ ಪ್ರಕರಣ].

ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗೆ ಹದಿನೈದು ದಿನಗಳ ಮೊದಲು ಮತ್ತು ಪರೀಕ್ಷೆ ನಡೆಯುವ ವೇಳೆ ಧ್ವನಿವರ್ಧಕಗಳಿಗೆ ಸಂಪೂರ್ಣ ನಿಷೇಧ ವಿಧಿಸುವುದು ಸೇರಿದಂತೆ ಹದಿನೈದು ಮಾರ್ಗಸೂಚಿಗಳನ್ನು ಹೈಕೋರ್ಟ್ ಐದು ವರ್ಷಗಳ ಹಿಂದೆ ನೀಡಿತ್ತು.

Also Read
ಮುಂಬೈ ಕಡಲ ತೀರದಲ್ಲಿ ತ್ಯಾಜ್ಯ ಮಾಲಿನ್ಯ: ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾದ ಬಾಂಬೆ ಹೈಕೋರ್ಟ್

ಹರಿಯಾಣ, ಪಂಜಾಬ್ ಹಾಗೂ ಚಂಡೀಗಢದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಾಗರೂಕರಾಗಿರಲು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಅವರನ್ನೊಳಗೊಂಡ ಪೀಠ ಸೂಚಿಸಿದೆ.

ಪಂಜಾಬ್, ಹರಿಯಾಣ ಅಥವಾ ಚಂಡೀಗಢದ ಯಾವುದೇ ನಾಗರಿಕರು ನಿಯಮ ಉಲ್ಲಂಘನೆಯಾದ ಬಗ್ಗೆ ವರದಿ ಮಾಡಿದರೆ, ಅಧಿಕಾರಿಗಳು ತ್ವರಿತ ಮತ್ತು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಶಬ್ದ ಮಾಲಿನ್ಯದ ಉಲ್ಲಂಘನೆಯನ್ನು ಆರೋಪಿಸಿ ಅಭಿಲಾಕ್ಷ ಸಚ್‌ದೇವ್ ಮತ್ತು ಕರಮ್ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಈ ಅವಲೋಕನ ಮಾಡಲಾಗಿದೆ.

Also Read
ಮತ್ತೆ ದೆಹಲಿಯನ್ನು ಕಾಡಲಾರಂಭಿಸಿದ ಕೃಷಿ ತ್ಯಾಜ್ಯ ಮಾಲಿನ್ಯ ಸಮಸ್ಯೆ: ವಿವರಣೆ ಕೇಳಿದ ಸುಪ್ರೀಂ ಕೋರ್ಟ್

ಲಲಿತಾ ಕುಮಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಸಂಜ್ಞೇಯ ಅಪರಾಧ ನಡೆದಾಗ ತಕ್ಷಣವೇ ದೂರು ದಾಖಲಿಸಿಕೊಳ್ಳುವುದು ಪೊಲೀಸ್‌ ಅಧಿಕಾರಿಗಳ ಜವಾಬ್ದಾರಿ ಎಂದು ಹೈಕೋರ್ಟ್‌ ಹೇಳಿದೆ.

ಕ್ರಮ ಕೈಗೊಳ್ಳಲು ವಿಫಲವಾದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ.

Kannada Bar & Bench
kannada.barandbench.com