ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಹಾರ ಚುನಾವಣೆ ಮತ್ತು ಹಿಂದೂ-ಮುಸ್ಲಿಂ ರಾಜಕೀಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಕುರಿತಂತೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಭೋಜ್‌ಪುರಿ ಗಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ನೇಹಾ ಸಿಂಗ್ ರಾಥೋಡ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ [ನೇಹಾ ಕುಮಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ನೇಹಾ ಅವರು ಸೆಪ್ಟೆಂಬರ್ 26 ರಂದು ತನಿಖಾಧಿಕಾರಿ ಎದುರು ಹಾಜರಾಗಬೇಕು ಮತ್ತು ಪೊಲೀಸರು ವರದಿ ಸಲ್ಲಿಸುವವರೆಗೆ ತನಿಖೆಗೆ ಸಹಕರಿಸಬೇಕು ಎಂದು ಸೆಪ್ಟೆಂಬರ್ 19ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಸೈಯದ್ ಕಮರ್ ಹಸನ್ ರಿಜ್ವಿ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.
ಎಫ್ಐಆರ್ ಮತ್ತಿತರ ದಾಖಲೆಗಳು ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿಗಳ ತನಿಖೆ ಸಮರ್ಥಿಸುವ ಸಂಜ್ಞೇಯ ಅಪರಾಧ ನಡೆದಿರುವುದಾಗಿ ಹೇಳುತ್ತವೆ. ಪಹಲ್ಗಾಮ್ ದಾಳಿ ನಡೆದ ಬೆನ್ನಿಗೇ ಈ ಪೋಸ್ಟ್‌ಗಳನ್ನು ಪ್ರಕಟಿಸಿರುವುದರಿಂದ ಸಾಮಾಜಿಕ ಅಶಾಂತಿ ಅಥವಾ ಹಗೆ ಹುಟ್ಟುವ ಸಾಧ್ಯತೆ ಇತ್ತು ಎಂದು ಅದು ಅಭಿಪ್ರಾಯಪಟ್ಟಿದೆ. .
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ಮೋದಿ ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಗಿಟ್ಟಿಸಲು ಮತ್ತು ಪಾಕಿಸ್ತಾನಕ್ಕೆ ಬೆದರಿಕೆ ಹಾಕಲು ಬಿಹಾರಕ್ಕೆ ಬಂದಿದ್ದಾರೆ ಎಂದು ರಾಥೋಡ್ ಪೋಸ್ಟ್ ಮಾಡಿದ್ದಕ್ಕಾಗಿ ಲಖನೌನ ಹಜರತ್‌ಗಂಜ್ ಪೊಲೀಸರು ಏಪ್ರಿಲ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳಡಿ ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಭಯೋತ್ಪಾದಕರನ್ನು ಹುಡುಕಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಬಿಜೆಪಿ ದೇಶವನ್ನು ಯುದ್ಧಕ್ಕೆ ದೂಡಲು ಬಯಸಿದೆ ಎಂದು ಅವರು ಬರೆದಿದ್ದರು. ಬಿಹಾರ ಚುನಾವಣೆಯಲ್ಲಿ ಅವರು ಹಿಂದೂ-ಮುಸ್ಲಿಂ ಅಥವಾ ಭಾರತ-ಪಾಕಿಸ್ತಾನದ ಹೆಸರಿನಲ್ಲಿ ಮತಗಳನ್ನು ಪಡೆಯಬಹುದು, ಮೂರನೇ ಆಯ್ಕೆ ಇಲ್ಲ ಮತ್ತು ಈ ಜನ ಆ ಎರಡು ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ ಎಂದು ಅವರು ಆರೋಪಿಸಿದ್ದರು.ಪ್ರಧಾ
ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ನೇಹಾ ಅವರು ಸಂವಿಧಾನದ 19(1)(ಎ) ವಿಧಿಯಡಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ತನಗೆ ಮೂಲಭೂತ ಹಕ್ಕಿದೆ. ಸರ್ಕಾರದ ಯಾವುದೇ ಅಧಿಕಾರಿ ಅಂತಹ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗದು ಎಂದು ಪ್ರತಿಪಾದಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಪ್ರಧಾನಿಯವರ ಹೆಸರನ್ನು ಅವಹೇಳನಕರ ರೀತಿಯಲ್ಲಿ ಬಳಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಜೊತೆಗೆ ಬಿಜೆಪಿ ಸರ್ಕಾರ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪಾಕಿಸ್ತಾನದೊಂದಿಗೆ ಯುದ್ಧ ಆರಂಭಿಸಿದೆ ಎಂದು ರಾಥೋಡ್ ಆರೋಪಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. ಅಂತೆಯೇ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನೇಹಾ ಅವರು ಮಾಡಿದ್ದ ಮನವಿಯನ್ನು ಅದು ವಜಾಗೊಳಿಸಿತು.