ಒಂದು ತಿಂಗಳು ಜೈಲಿನಲ್ಲಿದ್ದರೆ ಪ್ರಧಾನಿ, ಸಿಎಂ ಹಾಗೂ ಸಚಿವರ ಪದಚ್ಯುತಿ: ಇಂದು ಕೇಂದ್ರದಿಂದ ಮೂರು ಮಸೂದೆಗಳ ಮಂಡನೆ
ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲಿ ಪ್ರಧಾನಿ ಅಥವಾ ಮುಖ್ಯಮಂತ್ರಿ, ಸಚಿವರು ಕನಿಷ್ಠ 30 ದಿನಗಳ ಕಾಲ ಜೈಲಿನಲ್ಲಿದ್ದರೆ, ಅಂತಹವರನ್ನು ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಹೊಸ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ- 2025 ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಲೋಕಸಭೆಯಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಿದ್ದಾರೆ.
ಇದಲ್ಲದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಇನ್ನಿತರ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2025 ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2025ನ್ನು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನೂರ ಮೂವತ್ತನೇ ತಿದ್ದುಪಡಿ ಕಾಯಿದೆ ಜಾರಿಗೆ ಬಂದರೆ ಮೇಲೆ ಹೇಳಿದ ರೀತಿಯಲ್ಲಿ ಜೈಲುವಾಸ ಅನುಭವಿಸಿದರೆ, ಪ್ರಧಾನಿಯವರ ಸಲಹೆಯ ಮೇರೆಗೆ ಅವರನ್ನು ರಾಷ್ಟ್ರಪತಿಯವರು ಪದಚ್ಯುತಿಗೊಳಿಸಲಿದ್ದಾರೆ, ಒಂದೊಮ್ಮೆ ಈ ನಿಟ್ಟಿನಲ್ಲಿ ಪ್ರಧಾನಿ ಸಲಹೆ ನೀಡದೆ ಹೋದಲ್ಲಿ 31ನೇ ದಿನ ಅವರ ಸಚಿವ ಸ್ಥಾನ ರದ್ದಾಗಲಿದೆ.
ಇದೇ ರೀತಿ ಪ್ರಧಾನಿಯವರು ಸಹ ಇಂತಹದ್ದೇ ಸನ್ನಿವೇಶದಲ್ಲಿ ಮೂವತ್ತು ದಿನಗಳೊಳಗೆ ರಾಜೀನಾಮೆ ನೀಡದೆ ಹೋದಲ್ಲಿ 31ನೇ ದಿನ ಅವರು ಪದಚ್ಯುತರಾಗಲಿದ್ದಾರೆ.
ಒಂದು ವೇಳೆ ಪ್ರಧಾನಿ ಹಾಗೂ ಸಚಿವರು ಆರೋಪ ಮುಕ್ತರಾದರೆ ಮತ್ತೆ ಅವರ ನೇಮಕಾತಿ ಸಾಧ್ಯವಾಗಲಿದೆ ಎಂದು ಮಸೂದೆ ಹೇಳುತ್ತದೆ.
ಇದೇ ಬಗೆಯ ಕಾಯಿದೆಯನ್ನು ರಾಜ್ಯ ಸರ್ಕಾರಗಳ ಮುಖ್ಯಮಂತ್ರಿ, ಸಚಿವರಿಗೂ ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025ನ್ನು ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ಸಂಘಟನೆ (ತಿದ್ದುಪಡಿ) ಮಸೂದೆ, 2025ಕ್ಕೂ ಇದೇ ಬಗೆಯ ತಿದ್ದುಪಡಿ ಮಾಡಲಾಗಿದ್ದು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಸಚಿವರನ್ನು ತೆಗೆದುಹಾಕಲು ಕಾನೂನು ಬಲ ಒದಗಿಸುವುದು ಈ ಮಸೂದೆಗಳ ಉದ್ದೇಶವಾಗಿದೆ.
ಈ ಮೂರು ಮಸೂದೆಗಳನ್ನು ಮಂಡಿಸಿದ ನಂತರ ಹೆಚ್ಚಿನ ಪರಿಶೀಲನೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸಮಿತಿಗೆ ಕಳುಹಿಸುವ ಸಾಧ್ಯತೆಯಿದೆ.
ಮಸೂದೆ ಮಂಡಿಸಲು ಕಾರಣ ಏನು?
ಇತ್ತೀಚಿನ ದಿನಗಳಲ್ಲಿ, ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧನಕ್ಕೊಳಗಾದರೂ ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವರು ರಾಜೀನಾಮೆ ನೀಡದ ನಿದರ್ಶನಗಳು ಕಂಡುಬಂದಿದ್ದವು. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ 6 ತಿಂಗಳ ಕಾಲ ಜೈಲಿನಲ್ಲಿ ಇದ್ದರೂ ಅರವಿಂದ್ ಕೇಜ್ರಿವಾಲ್ ಅವರು ಹುದ್ದೆಯಲ್ಲಿ ಮುಂದುವರೆದಿದ್ದರು. ಅದೇ ರೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರು ಜಾಮೀನು ಪಡೆದ ಕೆಲ ಹೊತ್ತಿನಲ್ಲಿಯೇ ಸಚಿವರಾಗಿ ಹುದ್ದೆ ಅಲಂಕರಿಸಿದ್ದರು. ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾದ ಬಳಿಕ ಅವರು ಮತ್ತೆ ರಾಜೀನಾಮೆ ನೀಡಿದ್ದರು.