ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಏಕಪ್ರಕಾರ (ಆಮ್ನಿಬಸ್) ಆದೇಶ ರವಾನಿಸಿ ಆ ಮೂಲಕ ಉತ್ತರ ಪ್ರದೇಶ ಸರ್ಕಾರಿ ಅಧಿಕಾರಿಗಳು ಅಕ್ರಮ ಕಟ್ಟಡ ಮತ್ತು ನಿರ್ಮಿತಿಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದನ್ನು ತಡೆಯಬಹುದೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ಪ್ರವಾದಿ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಯಾಗ್‌ರಾಜ್ ನಿವಾಸಿಗಳ ಮನೆ ತೆರವುಗೊಳಿಸಿರುವುದನ್ನು ಪ್ರಶ್ನಿಸಿ ಜಮೀಯತ್ ಉಲಮಾ ಎ ಹಿಂದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಈ ಪ್ರಶ್ನೆ ಕೇಳಿತು.
ಕಾನೂನಿನ ನಿಯಮ ಪಾಲಿಸಬೇಕು ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ಏಕಪ್ರಕಾರವಾದ ಆದೇಶದ ಮೂಲಕ ಅಧಿಕಾರಿಗಳು ಅಕ್ರಮ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವುದನ್ನು ನಾವು ತಡೆದಂತಾಗುವುದಿಲ್ಲವೇ ಎಂದು ಜಮೀಯತ್ ಪರ ಹಾಜರಾದ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರನ್ನು ನ್ಯಾಯಾಲಯ ಕೇಳಿತು. ಆಗ ದವೆ "ಪಿಐಎಲ್ ಮಾತ್ರವೇ ಇಲ್ಲಿ ಪರಿಹಾರ. (ಮನೆ ಕಳೆದುಕೊಂಡ) ಬಡವರು ಇನ್ನೆಲ್ಲಿಗೆ ಹೋಗುತ್ತಾರೆ" ಎಂದು ಪ್ರತಿಕ್ರಿಯಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಬಾಕಿ ಉಳಿದಿರುವ ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ವಕೀಲ ಕಬೀರ್ ದೀಕ್ಷಿತ್ ಮೂಲಕ ದೇಶದ ಪ್ರಮುಖ ಮುಸ್ಲಿಂ ವಿದ್ವಾಂಸರ ಸಂಘಟನೆ ಜಮೀಯತ್ ಮನವಿ ಸಲ್ಲಿಸಿತ್ತು.
ಈ ಹಿಂದಿನ ವಿಚಾರಣೆ ವೇಳೆ ಉತ್ತರಪ್ರದೇಶ ಸರ್ಕಾರ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿತ್ತು. ಇಂದು ಪ್ರಕರಣದ ವಿಚಾರಣೆ ಸಮಯದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು "ಗಲಭೆಗಳಲ್ಲಿ ಭಾಗವಹಿಸುವುದು ಅಕ್ರಮ ಕಟ್ಟಡ ತೆರವುಗೊಳಿಸಲು ವಿನಾಯಿತಿಯಾಗದು” ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದವೆ ಅವರು “ಅಧಿಕಾರಿಗಳು ಒಂದು ನಿರ್ದಿಷ್ಟ ಸಮುದಾಯವನ್ನು ಆಯ್ದು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದರು.
ಉತ್ತರಪ್ರದೇಶ ಅಧಿಕಾರಿಗಳ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅರ್ಜಿದಾರರ ವಾದ ಅಸ್ಥಿರವಾಗಿದೆ ಎಂದರು. ಮತ್ತೊಂದು ಪ್ರಕರಣದಲ್ಲಿಆರೋಪಿಯಾಗಿರುವ ಕಾರಣ ಒಬ್ಬ ವ್ಯಕ್ತಿಯ ಮನೆ ಕೆಡವಲು ಸಾಧ್ಯವಿಲ್ಲಎಂದು ನ್ಯಾಯಾಲಯ ಆದೇಶ ನೀಡಬಹುದೇ?ʼ ಎಂದು ಪ್ರಶ್ನಿಸಿದರು. ಬಳಿಕ ನ್ಯಾಯಾಲಯ ಪ್ರಕರಣವನ್ನು ಮತ್ತು ಅದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನುಆಗಸ್ಟ್ 10ಕ್ಕೆ ಮುಂದೂಡಿತು.