KMVSTDCL and Karnataka HC 
ಸುದ್ದಿಗಳು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ: ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್‌ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಪದ್ಮನಾಭ ಅವರನ್ನು ನೆಕ್ಕುಂಟಿ ನಾಗರಾಜ್‌ ಮೂಲಕ ನೇಮಕ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯವು ಕಳೆದ ವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಿದೆ ಎನ್ನಲಾಗಿದೆ.

Siddesh M S

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬಹುಕೋಟಿ ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ. ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಮೊದಲ ಆರೋಪಿ ನಾಗರಾಜ್‌ ಆಗಿದ್ದಾರೆ.

ಸಿಐಡಿಯ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆದಿರುವ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ನೆಕ್ಕುಂಟಿ ನಾಗರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice S Vishwajith Shetty

“ನೆಕ್ಕುಂಟಿ ನಾಗರಾಜ್‌ ಅವರು 1 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲಾ ದಿನ ನ್ಯಾಯಾಲಯದಲ್ಲಿ ಹಾಜರಿರಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಬಾರದು. ಪ್ರಕರಣ ವಿಲೇವಾರಿಯಾಗುವವರೆಗೆ ನ್ಯಾಯಾಲಯದ ಅನುಮತಿ ಪಡೆಯದೇ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

“ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ 5ನೇ ಆರೋಪಿ ಜೊತೆಗೂಡಿ ನೆಕ್ಕುಂಟಿ ನಾಗರಾಜ್‌ ಅವರು 1 ಮತ್ತು 11ನೇ ಆರೋಪಿ ಜೊತೆ ಪಿತೂರಿ ನಡೆಸಿ ನಿಗಮದ ನಿಶ್ಚಿತ ಠೇವಣಿಯಲ್ಲಿನ ಹಣವನ್ನು ವಿಜಯವಾಡದಲ್ಲಿನ 3ನೇ ಆರೋಪಿ ಸತ್ಯನಾರಾಯಣ ಏಕತಾರಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಖಾಸಗಿ ಹಣಕಾಸು ಕಂಪೆನಿಯಾದ ಫಸ್ಟ್‌ ಕ್ರೆಡಿಟ್‌ ಕೊ-ಆಪರೇಟಿವ್‌ ಫೈನಾನ್ಸಿಂಗ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಆನಂತರ ಈ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆದರೆ, ನಿಗಮಕ್ಕೆ ಸಂಬಂಧಿಸಿದ ಹಣವನ್ನು ಅರ್ಜಿದಾರರ ಖಾತೆಗೆ ವರ್ಗಾಯಿಸಲಾಗಿಲ್ಲ ಎಂಬುದು ನಿರ್ವಿವಾದ. ಅರ್ಜಿದಾರರ ವಿರುದ್ಧದ ಆರೋಪಕ್ಕೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಬಹುದಾಗಿದ್ದು, ಈಗಾಗಲೇ ಮಂಜೂರಾಗಿದ್ದ ಮಧ್ಯಂತರ ಜಾಮೀನು ಷರತ್ತುಗಳನ್ನು ಅವರು ಅನುಪಾಲಿಸಿರುವುದರಿಂದ ಜಾಮೀನು ಪಡೆಯಲು ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಅರ್ಜಿದಾರರ ವಿರುದ್ಧ 120(ಬಿ), 406 ಮತ್ತು 420 ಆರೋಪಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪುತ್ರಿಯ ವಿವಾಹದಲ್ಲಿ ಭಾಗಿಯಾಲು ನಾಗರಾಜ್‌ಗೆ ಈ ನ್ಯಾಯಾಲಯ ಮಂಜೂರು ಮಾಡಿದ್ದ ಮಧ್ಯಂತರ ಜಾಮೀನು ಷರತ್ತುಗಳನ್ನು ಅವರು ಉಲ್ಲಂಘಿಸಿಲ್ಲ. ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಬಹುದಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ಎಚ್‌ಸಿಜಿಪಿ ಎಂ ಎಂ ವಹೀದಾ ಅವರು “ಹಾಲಿ ಪ್ರಕರಣದಲ್ಲಿ 89,62,99,500 ಕೋಟಿ ರೂಪಾಯಿ ವಂಚನೆಯಾಗಿದೆ. ಬೆಂಗಳೂರಿನ ವಸಂತ ನಗರದಲ್ಲಿನ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾತೆಯಲ್ಲಿದ್ದ ನಿಗಮದ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸಲು ಅರ್ಜಿದಾರರು ಪಿತೂರಿ ನಡೆಸಿದ್ದಾರೆ. ಇಲ್ಲಿ ಭಾರಿ ಹಗರಣ ನಡೆದಿದೆ” ಎಂದು ಆಕ್ಷೇಪಿಸಿದ್ದರು.

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಪದ್ಮನಾಭ ಅವರನ್ನು ನೆಕ್ಕಂಟಿ ನಾಗರಾಜ್‌ ಮೂಲಕ ನೇಮಕ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯವು ಕಳೆದ ವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಿದೆ ಎನ್ನಲಾಗಿದೆ.

ಪ್ರಕರಣದ ಹಿನ್ನೆಲೆ: 2024ರ ಮೇ 28ರಂದು ನಿಗಮದ ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಅವರು ನಿಗಮದ ಹಣವನ್ನು ಬೆಂಗಳೂರಿನ ಎಂ ಜಿ ರಸ್ತೆಯಲ್ಲಿನ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳು ಅಕ್ರಮವಾಗಿ ವರ್ಗಾವಣೆ ಮಾಡಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಆನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜೂನ್‌ 4ರಂದು ನಾಗರಾಜ್‌ ಅವರನ್ನು ಬಂಧಿಸಿದ್ದು, ಮಾರನೇಯ ದಿನ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ನೀಡಿತ್ತು. ಮೊದಲಿಗೆ ರಿಮ್ಯಾಂಡ್‌ ಅರ್ಜಿಯಲ್ಲಿ ನಾಗರಾಜ್‌ ಅವರನ್ನು 10ನೇ ಆರೋಪಿ ಮಾಡಲಾಗಿತ್ತು. ಈಗ ಪ್ರಕರಣದಲ್ಲಿ ತನಿಖೆ ಮುಗಿದ್ದು, ಒಟ್ಟು 12 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ನಾಗರಾಜ್‌ 12ನೇ ಆರೋಪಿಯಾಗಿದ್ದಾರೆ.

Nekunti Nagaraj Vs State of Karnataka.pdf
Preview