ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದಲ್ಲಿ ನಟ ರಾಜಕಾರಣಿ ಹಾಗೂ ಟಿವಿಕೆ ಸಂಸ್ಥಾಪಕ ವಿಜಯ್ ಭಾಷಣ ಆಲಿಸಲು ದೊಡ್ಡಮಟ್ಟದಲ್ಲಿ ಜನಸಮೂಹ ಹರಿದುಬಂದ ಪರಿಣಾಮ 41 ಜನ ಸಾವನ್ನಪ್ಪಿದ್ದ ಘಟನೆಯ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಪ್ರಧಾನ ಪೀಠ ಶುಕ್ರವಾರ ಆದೇಶಿಸಿದೆ ಎಂದು ವರದಿಯಾಗಿದೆ.
ಕ್ರಿಮಿನಲ್ ಪ್ರಕರಣದಲ್ಲಿ ನಟ ವಿಜಯ್ ಅವರನ್ನು ಹೆಸರಿಸದೇ ಇರುವುದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಸೆಂಥಿಲ್ ಕುಮಾರ್ ಈ ಆದೇಶ ನೀಡಿದ್ದಾರೆ. ಪ್ರಕರಣವನ್ನು ಟಿವಿಕೆ ನಾಯಕತ್ವ ನಿಭಾಯಿಸಿದ ರೀತಿಗೂ ನ್ಯಾಯಾಲಯದಿಂದ ಟೀಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ನಿರಾಕರಿಸಿತ್ತು. ತಮಿಳುನಾಡು ಪೊಲೀಸರ ತನಿಖೆ ಆರಂಭಿಕ ಹಂತದಲ್ಲಿದ್ದು ಈ ಹಂತದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಅದು ಹೇಳಿತ್ತು.
ಸೆಪ್ಟೆಂಬರ್ 27 ರಂದು, ಕರೂರ್ ಜಿಲ್ಲೆಯ ವೇಲುಸ್ವಾಮಿಪುರಂನಲ್ಲಿ ಟಿವಿಕೆ ಪಕ್ಷ ಆಯೋಜಿಸಿದ್ದ ಸಮಾವೇಶದಲ್ಲಿ ವಿಜಯ್ ಪ್ರಚಾರ ಭಾಷಣ ಮಾಡುತ್ತಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದರು ಮತ್ತು ಅಪಾರ ಜನ ಗಾಯಗೊಂಡಿದ್ದರು.
ವಿಜಯ್ ಹೊರತುಪಡಿಸಿ ವಿವಿಧ ಟಿವಿಕೆ ಕಾರ್ಯಕರ್ತರ ವಿರುದ್ಧ ಕೊಲೆಗೆ ಸಮನಾಗದ ನರಹತ್ಯೆ, ಜನರ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವುದು, ಜನಸಂದಣಿಯ ಪ್ರಮಾಣ ಮತ್ತು ಕಾರ್ಯಕ್ರಮದ ಸ್ಥಳದ ವ್ಯವಸ್ಥೆಯನ್ನು ಅಂದಾಜಿಸುವಲ್ಲಿ ಎಡವಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇಬ್ಬರು ಟಿವಿಕೆ ಕಾರ್ಯಕರ್ತರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ತೀರ್ಪನ್ನು ಇಂದು ಮಧ್ಯಾಹ್ನ, ಮಧುರೈ ನ್ಯಾಯಾಲಯದ ಏಕಸದಸ್ಯ ಪೀಠ ಕಾಯ್ದಿರಿಸಿತ್ತು.