ವಿಜಯ್ ರ‍್ಯಾಲಿ ಕಾಲ್ತುಳಿತ ಪ್ರಕರಣ ಸಿಬಿಐಗೆ ಇಲ್ಲ; ರಾಜಕೀಯ ಸಮಾವೇಶಗಳಿಗೆ ಕಠಿಣ ಷರತ್ತು: ಮದ್ರಾಸ್‌ ಹೈಕೋರ್ಟ್‌

ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸುವವರೆಗೆ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬಳಿ ಯಾವುದೇ ರ‍್ಯಾಲಿಗೆ ಅನುಮತಿ ನೀಡುವುದಿಲ್ಲ ಎಂದು ಇದೇ ವೇಳೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.
Vijay, Madurai Bench of Madras High court
Vijay, Madurai Bench of Madras High courtFacebook
Published on

ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್‌ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಡೆಸಿದ್ದ ಸಮಾವೇಶದಲ್ಲಿ ಕಾಲ್ತುಳಿತ ಉಂಟಾಗಿ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮದ್ರಾಸ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಘಟನೆಯ ಕುರಿತು ತಮಿಳುನಾಡು ಪೊಲೀಸರ ತನಿಖೆ ಆರಂಭಿಕ ಹಂತದಲ್ಲಿದ್ದು ಸಿಬಿಐ ತನಿಖೆ ಕೋರಿದ ಅರ್ಜಿದಾರರು ಕಾಲ್ತುಳಿತ ಘಟನೆಯ ಸಂತ್ರಸ್ತರಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ಎಂ ದಂಡಪಾಣಿ ಮತ್ತು ಎಂ ಜೋತಿರಾಮನ್ ಅವರಿದ್ದ ಮಧುರೈ ಪೀಠ ಗಮನಿಸಿತು.

Also Read
ಪಕ್ಷದ ಧ್ವಜದ ಮೂಲಕ ವಾಣಿಜ್ಯ ಚಿಹ್ನೆ ಉಲ್ಲಂಘನೆ: ನಟ ವಿಜಯ್‌ ಹಾಗೂ ಟಿವಿಕೆಗೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌

“ತೊಂದರೆಗೊಳಗಾದ ವ್ಯಕ್ತಿಗಳು ನ್ಯಾಯಾಲಯಕ್ಕೆ ಬಂದರೆ ಅವರಿಗೆ ರಕ್ಷಣೆ ನೀಡುತ್ತೇವೆ. ನೀವು ಯಾರು? ಈ ನ್ಯಾಯಾಲಯ ರಾಜಕೀಯ ಕ್ಷೇತ್ರವೆಂದು ಪರಿಗಣಿಸಬೇಡಿ. ತನಿಖೆಯಲ್ಲಿ ಏನಾದರೂ ತಪ್ಪಾದಲ್ಲಿ, ನೀವು ಬನ್ನಿ. ಇದು ಆರಂಭಿಕ ಹಂತ" ಎಂದು ಅದು ಹೇಳಿತು.

ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸುವವರೆಗೆ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬಳಿ ಯಾವುದೇ ರ‍್ಯಾಲಿಗೆ ಅನುಮತಿ ನೀಡುವುದಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ಇದೇ ವೇಳೆ ನ್ಯಾಯಾಲಯ ದಾಖಲಿಸಿಕೊಂಡಿತು.

ರಾಜಕೀಯ ಸಮಾವೇಶ ಅಥವಾ ಸಭೆ ನಡೆದಾಗ ಆ ಸ್ಥಳದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಸಮಾವೇಶದ ತುರ್ತು ಸಂದರ್ಭಗಳಲ್ಲಿ ತುರ್ತು ನಿರ್ಗಮನ ಮಾರ್ಗಗಳು ಮತ್ತು ವಾಹನ ನಿಲ್ದಾಣ ಸೌಲಭ್ಯ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Also Read
ಟಿವಿಕೆ ಪಕ್ಷದ ಧ್ವಜ ರದ್ದತಿಗೆ ಮದ್ರಾಸ್ ಹೈಕೋರ್ಟ್ ನಕಾರ: ನಟ ವಿಜಯ್ ಸದ್ಯಕ್ಕೆ ನಿರಾಳ

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಹನ್ನೆರಡಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು.  ಕೆಲವು ಅರ್ಜಿಗಳಲ್ಲಿ ಸಿಬಿಐ ತನಿಖೆಗೆ ಮನವಿ ಮಾಡಲಾಗಿದ್ದರೆ ಇನ್ನೂ ಕೆಲವು ಎಲ್ಲಾ ರಾಜಕೀಯ ಸಭೆಗಳ ಸಂಬಂಧ ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸುವಂತೆ ಕೋರಿದ್ದವು. ಮತ್ತಷ್ಟು ಅರ್ಜಿಗಳಲ್ಲಿ ಪರಿಹಾರದ ಬೇಡಿಕೆ ಇಡಲಾಗಿತ್ತು.

41 ಜನರನ್ನು ಬಲಿಪಡೆದ ಘಟನೆ ಹಿನ್ನೆಲೆಯಲ್ಲಿ ವಿಜಯ್‌ ಹೊರತುಪಡಿಸಿ ವಿವಿಧ ಟಿವಿಕೆ ಕಾರ್ಯಕರ್ತರ ವಿರುದ್ಧ ಕೊಲೆಗೆ ಸಮನಲ್ಲದ ಅಪರಾಧಿಕ ನರಹತ್ಯೆ, ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ, ಜನಸಂದಣಿಯ ಗಾತ್ರ ಮತ್ತು ಸ್ಥಳದ  ವ್ಯವಸ್ಥೆ ಅಂದಾಜಿಸುವಲ್ಲಿ ಎಡವಿದ್ದಕ್ಕಾಗಿ ಎಫ್‌ಐಆರ್‌ ದಾಖಲಿಸಲಾಗಿತ್ತು.

Kannada Bar & Bench
kannada.barandbench.com