ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ವಿವೋ ತನ್ನ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ದೆಹಲಿ ಹೈಕೋರ್ಟ್ ಬುಧವಾರ ಅನುಮತಿ ನೀಡಿದ್ದು, ಅದು ₹ 950 ಕೋಟಿಗಳ ಬ್ಯಾಂಕ್ ಖಾತರಿ ಒದಗಿಸಬೇಕು ಮತ್ತು ತನ್ನ ಖಾತೆಗಳಲ್ಲಿ ₹ 250 ಕೋಟಿ ಕನಿಷ್ಠ ಹಣ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದೆ.
ಬ್ಯಾಂಕ್ ಖಾತರಿ ನೀಡುವುದಕ್ಕಾಗಿ ಏಳು ಕೆಲಸದ ದಿನಗಳ ಕಾಲಾವಕಾಶವನ್ನು ನ್ಯಾಯಮೂರ್ತಿ ಯಶವಂತ್ ವರ್ಮಾ ವಿವೋಗೆ ನೀಡಿದರು. ತನ್ನ ಬ್ಯಾಂಕ್ ಚಟುವಟಿಕೆ, ಪಾವತಿ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ವಿವರ ಸಲ್ಲಿಸುವಂತೆ ಅವರು ಸೂಚಿಸಿದರು.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿವೋ ಹಾಗೂ ಅದರ ಸಂಬಂಧಿ ಕಂಪೆನಿಗಳಾದ ಒಪ್ಪೊ ಹಾಗೂ ಶಓಮಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು.
ವಿಚಾರಣೆ ವೇಳೆ ಇ ಡಿ ಪರ ವಾದ ಮಂಡಿಸಿದ ವಕೀಲ ಜೊಹೆಬ್ ಹೊಸೈನ್, ವಿವೋ ₹ 1200 ಕೋಟಿಯಷ್ಟು ಮೊತ್ತದ ಅಕ್ರಮ ಹಣ ವರ್ಗಾವಣೆ ಕೃತ್ಯ ನಡೆಸಿದೆ ಎಂದು ಆರೋಪಿಸಿದರು. ಕಂಪೆನಿ ಸಲ್ಲಿಸಿದ ದಾಖಲೆಗಳು 5 ಗಿಗಾ ಬೈಟ್ಸ್‌ಗಿಂತಲೂ ಅಧಿಕ ಇರುವುದರಿಂದ ಮಾಹಿತಿ ವಿಶ್ಲೇಷಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಒಂದು ವಾರ ಕಾಲಾವಕಾಶ ಬೇಕು ಎಂದು ಕೋರಿದರು.
ವಿವೋ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂತ್ರಾ ಮತ್ತು ಸಿದ್ಧಾರ್ಥ್ ಅಗರ್‌ವಾಲ್, “ವಿವೋದ ಬ್ಯಾಂಕ್ ಖಾತೆಗಳನ್ನು ಇ ಡಿ ಸ್ಥಗಿತಗೊಳಿಸುವ ಮೂಲಕ ಅವುಗಳಲ್ಲಿದ್ದ ಹಣದ ಬಳಕೆಯನ್ನಷ್ಟೇ ತಡೆ ಹಿಡಿದಿಲ್ಲ ಬದಲಿಗೆ ಹೊಸ ನಗದು ವಹಿವಾಟನ್ನೂ ಸ್ಥಗಿತಗೊಳಿಸಿದೆ" ಎಂದು ಅವರು ಹೇಳಿದರು.
"ವ್ಯಾಪಾರ ಮಾಡಲು ʼಆಮ್ಲಜನಕʼದ ಪೂರೈಕೆ ವಿವೋಗೆ ಅವಶ್ಯಕ. ಖಾತೆಯಲ್ಲಿರುವ ಹಣ ಮುಟ್ಟುವುದಿಲ್ಲ. ಆದರೆ ಕನಿಷ್ಟ ಆ ಖಾತೆಗಳು ನಿರ್ವಹಣೆಗೆ ಒಳಗಾಗಲಿ, ಬ್ಯಾಲೆನ್ಸ್ ಏನೇ ಇದ್ದರೂ ನಾವು ಕಾಯ್ದುಕೊಳ್ಳುತ್ತೇವೆ. ಆದರೆ ವ್ಯವಹಾರ ನಡೆಸಲು ಎಲ್ಲವೂ ಅಗತ್ಯ" ಎಂದು ಅಗರ್‌ವಾಲ್ ವಾದಿಸಿದರೆ ಲೂತ್ರಾ ಅವರು "ಪ್ರತಿ ದಿನವೂ ವಿವೊ ಶವಪೆಟ್ಟಿಗೆಯ ಮೇಲೆ ಹೊಡೆಯುತ್ತಿರುವ ಮೊಳೆಗಳಾಗಿವೆʼ ಎಂದು ವಿವರಿಸಿದರು.
ಬಳಿಕ ನ್ಯಾಯಾಲಯ ಬ್ಯಾಂಕ್ ಖಾತೆ ನಿರ್ವಹಣೆಗೆ ಕೆಲವು ಷರತ್ತುಗಳೊಡನೆ ಸಮ್ಮತಿ ಸೂಚಿಸಿತು. ಇ ಡಿ ಮತ್ತು ವಿವೋಗೆ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಆದೇಶಿಸಿದ ನ್ಯಾಯಾಲಯ ಜುಲೈ 28ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.