ಸುದ್ದಿಗಳು

ಮೊರೆಟೊರಿಯಂ ಅವಧಿಯಲ್ಲಿ ವಿಧಿಸಿದ ಬಡ್ಡಿಯ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲು ಆದೇಶಿಸಿದ ಸುಪ್ರೀಂ ಕೋರ್ಟ್‌

Bar & Bench

ಸಾಲ ಮರುಪಾವತಿ ಮುಂದೂಡಿಕೆಯ (ಮೊರೆಟೊರಿಯಂ) ಸೌಲಭ್ಯವನ್ನು ಪಡೆದಿದ್ದ ಅವಧಿಗೆ ಸಾಲಗಾರರ ಕಂತುಗಳ ಮೇಲೆ ವಿಧಿಸಲಾಗಿದ್ದ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ಹೊರಡಿಸಿದೆ. ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಚ್‌ 1ರಿಂದ ಆಗಸ್ಟ್‌ 31ರ ವರೆಗೆ ಸಾಲದ ಕಂತುಗಳ ಮರುಪಾವತಿಯನ್ನು ಮುಂದೂಡುವ ಸೌಲಭ್ಯವನ್ನು ಒದಗಿಸಿತ್ತು.

ಈ ಅವಧಿಯಲ್ಲಿ ವಿಧಿಸಲಾದ ಚಕ್ರಬಡ್ಡಿಯನ್ನು (ಬಡ್ಡಿಯ ಮೇಲಿನ ಬಡ್ಡಿ) ಸಾಲಗಾರರಿಗೆ ಮರಳಿಸುವ ಬದಲು ಮುಂದಿನ ಕಂತುಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ನ್ಯಾಯಾಲಯ ಹೇಳಿದೆ. “ಸಾಲದ ಮೊತ್ತ ಎಷ್ಟೇ ಇರಲಿ ಮೊರಟೊರಿಯಂ ಅವಧಿಯಲ್ಲಿ ಬಡ್ಡಿಯ ಮೇಲಿನ ಬಡ್ಡಿ ಅಥವಾ ಚಕ್ರ ಬಡ್ಡಿಯನ್ನು ಹಾಕುವಂತಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಹಾಗೆ ಸಂಗ್ರಹಿಸಲಾಗಿರುವ ಹಣವನ್ನು ಹಿಂದುರಿಗಿಸಬೇಕು,” ಎಂದು ನ್ಯಾ. ಎಂ ಆರ್ ಶಾ ಅವರು ಆದೇಶದ ವೇಳೆ ತಿಳಿಸಿದರು.

ಇದನ್ನು ಹೊರತು ಪಡಿಸಿದಂತೆ ಅರ್ಜಿದಾರರು ಕೋರಿದ್ದ ಉಳಿದ ಪರಿಹಾರಗಳನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ. ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಬೇಕು, ಮೊರೆಟೊರಿಯಂ ಅವಧಿಯನ್ನು ವಿಸ್ತರಿಸಬೇಕು, ವಲಯವಾರು ಪರಿಹಾರವನ್ನು ಘೋಷಿಸಬೇಕು ಎನ್ನುವ ಬೇಡಿಕೆಗಳು ಅರ್ಜಿದಾರರಿಂದ ಪ್ರಮುಖವಾಗಿ ಕೇಳಿ ಬಂದಿದ್ದವು.

“ಅರ್ಥಿಕ ಮತ್ತು ವಿತ್ತೀಯ ನೀತಿಗಳು ನ್ಯಾಯಾಂಗದ ಪರಾಮರ್ಶನೆಗೆ ಒಳಪಡುವುದಿಲ್ಲ. ಹಾಗಾಗಿ, ಕೇವಲ ಒಂದು ವಲಯವು ಸರ್ಕಾರದ ನೀತಿಗೆ ಸಂಬಂಧಿಸಿದ ನಿರ್ಧಾರದಿಂದ ಅಸಂತುಷ್ಟವಾಗಿದೆ ಎಂದಾಕ್ಷಣ ಮಧ್ಯಪ್ರವೇಶಿಸಲಾಗದು. ಹಾಗೊಮ್ಮೆ ದುರುದ್ದೇಶ, ಮನಸೋಇಚ್ಛೆಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದಾಗ ಮಾತ್ರವೇ ಮಧ್ಯಪ್ರವೇಶ ಸಾಧ್ಯ,” ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣೆಗಳ ಸಂದರ್ಭಗಳಲ್ಲಿ, ಮೊರಟೊರಿಯಂ ಅವಧಿಯನ್ನು ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸಿದರೆ ಅದು ಒಟ್ಟಾರೆ ಸಾಲದ ಶಿಸ್ತಿಗೆ ಸಮಸ್ಯೆ ಉಂಟು ಮಾಡಲಿದೆ. ಅಲ್ಲದೇ, ಸುದೀರ್ಘ ಮೊರಟೊರಿಯಂ ನೀಡಿದರೆ ಅದು ಸಾಲಪಡೆಯುವವರಲ್ಲಿನ ಸಾಲದೆಡೆಗಿನ ವರ್ತನೆಯ ಮೇಲೆ ಪರಿಣಾಮ ಬೀರಬಹುದಾಗಿದೆ. ಇದು ಮುಂದೆ ನಿಗದಿತ ಸಾಲ ಪಾವತಿ ಪುನಾರಂಭವಾದಾಗ ಸಾಲ ಮರುಪಾವತಿಯಲ್ಲಿ ಅಪರಾಧಿಕ ಸವಾಲುಗಳು ಉದ್ಭವಿಸಲು ಕಾರಣವಾಗಬಹುದು. ಇದರ ಪರಿಣಾಮ ಸಣ್ಣ ಸಾಲಗಾರರ ಮೇಲಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಈ ಹಿಂದೆ ಅರ್‌ಬಿಐ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿತ್ತು ಎನ್ನುವುದನ್ನು ಇಲ್ಲಿ ನೆನೆಯಬಹುದು.

ಇಷ್ಟೇ ಅಲ್ಲದೆ, ಸಾಂಕ್ರಾಮಿಕ ಪೂರ್ವ ಹಾಗೂ ಸಾಂಕ್ರಾಮಿಕತೆಯ ನಂತರ ತೊಂದರೆಗೆ ಸಿಲುಕಿರುವ ಸಾಲಗಾರರ ನಡುವಿನ ವ್ಯತ್ಯಾಸದೆಡೆಗೂ ಆರ್‌ಬಿಐ ತನ್ನ ಅಫಿಡವಿಟ್‌ನಲ್ಲಿ ಬೆರಳು ಮಾಡಿತ್ತು. "ಈ ಮುಂಚೆಯೇ ಆರ್ಥಿಕ ಒತ್ತಡಕ್ಕೆ ತುತ್ತಾಗಿದ್ದ ಹಾಗೂ ಸಾಂಕ್ರಾಮಿಕತೆಯ ಸಂಕಷ್ಟದ ಪರಿಣಾಮಕ್ಕೂ ಈಡಾದ ಖಾತೆ ಹಾಗೂ ಕೇವಲ ಈ ಹಿಂದೆ ಯಾವುದೇ ಆರ್ಥಿಕ ಒತ್ತಡವಿರದ ಆದರೆ ಸಾಂಕ್ರಾಮಿಕತೆಯ ಪರಿಣಾಮಕ್ಕೆ ತುತ್ತಾದ ಖಾತೆ ಇವೆರಡರ ಋಣಚಿತ್ರಣ ಬೇರೆಯದೇ ಅಗಿರುತ್ತದೆ. ಈ ಇಬ್ಬರು ಸಾಲಗಾರರನ್ನೂ ಏಕರೂಪವಾಗಿ ಕಾಣುವುದು ಆರ್ಥಿಕ ಸಂವೇದನೆಯನ್ನು ಪೂರ್ಣವಾಗಿ ಬದಿಗೆ ಸರಿಸಿದಂತೆ." ಎಂದು ಅಫಿಡವಿಟ್‌ನಲ್ಲಿ ಆರ್‌ಬಿಐ ಹೇಳಿತ್ತು.