ವಕ್ಫ್ ತಿದ್ದುಪಡಿ ಕಾಯಿದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ನಂತರ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡದಂತೆ ಬಿಜೆಪಿ ಮತ್ತು ಟಿಎಂಸಿಗೆ ಕಲ್ಕತ್ತಾ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಯಾರೂ ಪ್ರಚೋದನಕಾರಿ ಭಾಷಣಗಳನ್ನು ಮಾಡಬಾರದು ಎಂದ ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ರಾಜಾ ಬಸು ಚೌಧರಿ ಅವರಿದ್ದ ವಿಭಾಗೀಯ ಪೀಠ ಹೇಳಿತು. ಇದೇ ವೇಳೆ ಪ್ರತಿಭಟನೆ ನಿಷೇಧಿಸಲು ನಿರಾಕರಿಸಿತು.
ಹಿಂಸಾಚಾರದಿಂದ ಹಾನಿಗೊಳಗಾದ ಕುಟುಂಬಗಳ ಪುನರ್ವಸತಿಗೆ ಅನುಕೂಲವಾಗುವಂತೆ ಸಮಿತಿಯನ್ನು ರಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಸಮಿತಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಇರಲಿದ್ದಾರೆ. ತೊಂದರೆಗೊಳಗಾದ ಜನರನ್ನು ಗುರುತಿಸುವುದು ಮತ್ತು ಅವರಿಗೆ ಆಹಾರ ಮತ್ತು ಆಶ್ರಯ ಒದಗಿಸುವುದು ಸಮಿತಿಯ ಕಾರ್ಯವಾಗಿದೆ.
ಪಶ್ಚಿಮ ಬಂಗಾಳ ಸರ್ಕಾರಕ್ಕೂ ಪುನರ್ವಸತಿ ಯೋಜನೆ ರೂಪಿಸಲು ನ್ಯಾಯಾಲಯ ಇದೇ ವೇಳೆ ಸೂಚಿಸಿತು. ಇನ್ನೂ ಕೆಲ ಕಾಲ ರಾಜ್ಯದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಇರಲಿ ಎಂದು ಅದು ಹೇಳಿದೆ.
ವಕ್ಫ್ ತಿದ್ದುಪಡಿ ಕಾಯಿದೆ ರೂಪುಗೊಂಡ ಹಿನ್ನೆಲೆಯ್ಲಿ ಪ. ಬಂಗಾಳದಲ್ಲಿ ನಡೆದ ಹಿಂಸಾಚಾರ ಕುರಿತಂತೆ ಬಿಜೆಪಿಯ ಸುವೇಂದು ಅಧಿಕಾರಿ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಚಾರ ತಿಳಿಸಿದೆ.