Supreme Court, Waqf Amendment Act 
ಸುದ್ದಿಗಳು

ವಕ್ಫ್ ತಿದ್ದುಪಡಿ ಕಾಯಿದೆ: ಕೆಲ ಸೆಕ್ಷನ್‌ಗಳಿಗೆ ತಡೆ ನೀಡಲು ಸುಪ್ರೀಂ ಚಿಂತನೆ, ನಾಳೆ ಮುಂದುವರೆಯಲಿದೆ ವಿಚಾರಣೆ

ಈಚೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ಕಾಯಿದೆಯನ್ನು ಪ್ರಶ್ನಿಸಿ ಹಲವು ವ್ಯಕ್ತಿಗಳು, ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.

Bar & Bench

ಕೆಲ ದಿನಗಳ ಹಿಂದೆ ರಾಷ್ಟ್ರಪತಿಗಳ ಅಂಕಿತ ದೊರೆತ ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಕೆಲವು ಪ್ರಮುಖ ನಿಬಂಧನೆಗಳಿಗೆ ತಡೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರದ ವಿಚಾರಣೆ ವೇಳೆ ಇಂಗಿತ ವ್ಯಕ್ತಪಡಿಸಿದೆ. ಕೇಂದ್ರ ವಕ್ಫ್ ಮಂಡಳಿ ಮತ್ತು ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ಸೇರ್ಪಡೆ, ವಕ್ಫ್ ಆಸ್ತಿಗಳ ವಿವಾದ ನಿರ್ಧರಿಸುವ ಜಿಲ್ಲಾಧಿಕಾರಿಗಳ ಅಧಿಕಾರ ಮತ್ತು ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿದ ಆಸ್ತಿಗಳನ್ನು ಡಿ-ನೋಟಿಫೈ ಮಾಡುವ ಸೆಕ್ಷನ್‌ಗಳು ಇದರಲ್ಲಿ ಸೇರಿವೆ.

ಈ ಕುರಿತು ಯಾವುದೇ ಆದೇಶ ನೀಡದ ಸಿಜೆಐ ಸಂಜೀವ್‌ ಖನ್ನಾ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಳೆ ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.

ಮಧ್ಯಂತರ ಆದೇಶದ ವೇಳೆ ಈ ಕೆಳಗಿನ ಅಂಶಗಳನ್ನು ಪರಿಗಣಿಸುವ ಬಗ್ಗೆ ನ್ಯಾಯಾಲಯ ಹೇಳಿತು:  

1. ನ್ಯಾಯಾಲಯ ವಕ್ಫ್ ಎಂದು ಘೋಷಿಸಿದ ಯಾವುದೇ ಆಸ್ತಿಯನ್ನು ಡಿ-ನೋಟಿಫೈ ಮಾಡುವಂತಿಲ್ಲ ಅಥವಾ ವಕ್ಫ್ ಅಲ್ಲದವು ಎಂದು ಪರಿಗಣಿಸುವಂತಿಲ್ಲ.. ಅವು ಬಳಕೆಯಿಂದಾದ ವಕ್ಫ್ ಆಸ್ತಿ ಆಗಿರಲಿ ಅಥವಾ ಅಲ್ಲದಿರಲಿ.

2. ಜಿಲ್ಲಾಧಿಕಾರಿ ವಿಚಾರಣೆಯನ್ನು ಮುಂದುವರಿಸಬಹುದು .. ಆದರೆ ಈ ಸೆಕ್ಷನ್‌ ಜಾರಿಗೆ ತರುವಂತಿಲ್ಲ

3. ವಕ್ಫ್‌ ಮಂಡಳಿ ಮತ್ತು ಸಮಿತಿಗೆ ಸಂಬಂಧಿಸಿದಂತೆ.. ಪದನಿಮಿತ್ತ ಸದಸ್ಯರನ್ನು ನೇಮಿಸಬಹುದು. ಆದರೆ ಉಳಿದ ಸದಸ್ಯರು ಮುಸ್ಲಿಮ್‌ ಸಮುದಾಯಕ್ಕೆ ಸೇರಿರಬೇಕು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ನೇಮಿಸಲು ಅವಕಾಶ ನೀಡದಂತೆ ದೇವಾಲಯಗಳ ಆಡಳಿತ ಮಂಡಳಿಗಳಲ್ಲಿ ಹಿಂದೂಯೇತರರನ್ನು ನೇಮಿಸಲು ಅವಕಾಶ ನೀಡಲಾಗುತ್ತದೆಯೇ ಎಂದು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಉದ್ದೇಶಿಸಿ ನ್ಯಾಯಾಲಯ "ಇಂದಿನಿಂದ ಮುಸ್ಲಿಮರು ಹಿಂದೂ ದತ್ತಿ ಮಂಡಳಿಗಳ ಭಾಗವಾಗಲು ಅವಕಾಶ ನೀಡುವುದಾಗಿ ನೀವು ಹೇಳುತ್ತಿದ್ದೀರಾ? ಅದನ್ನು ಬಹಿರಂಗವಾಗಿ ಹೇಳಿ"  ಎಂದು ಕೇಳಿತು.

ಇಬ್ಬರಿಗಿಂತ ಹೆಚ್ಚು ಸದಸ್ಯರು ಮುಸ್ಲಿಮೇತರರಾಗಿರಬಾರದು ಎಂದು ಅಫಿಡವಿಟ್‌ನಲ್ಲಿ ಹೇಳಬಹುದು ಎಂದು ಎಸ್‌ಜಿ ಮೆಹ್ತಾ ಹೇಳಿದರು.

ವಿಚಾರಣೆಯ ಈ ಹಂತದಲ್ಲಿ ನ್ಯಾಯಾಲಯವು ವಕ್ಫ್ ಮಂಡಳಿಯ 22 ಸದಸ್ಯರಲ್ಲಿ ಕೇವಲ 8 ಮಂದಿ ಮುಸ್ಲಿಮರು ಇರಲಿದ್ದಾರೆ ಎಂದು ನ್ಯಾಯಾಲಯವು ಎತ್ತಿ ತೋರಿಸಿತು.

"ಕಾಯಿದೆಯ ಪ್ರಕಾರ, 8 ಸದಸ್ಯರು ಮುಸ್ಲಿಮರು. ಇಬ್ಬರು ನ್ಯಾಯಾಧೀಶರು ಮುಸ್ಲಿಮರಲ್ಲದಿರಬಹುದು! ಅಲ್ಲದೆ, ಉಳಿದವರು ಮುಸ್ಲಿಮೇತರರು" ಎಂದು ಪೀಠ ಪ್ರಶ್ನಿಸಿತು.

"ಹಾಗಾದರೆ ಈ ಪೀಠವೂ ಪ್ರಕರಣ ಆಲಿಸಲು ಸಾಧ್ಯವಿಲ್ಲ" (ಒಬ್ಬರೂ ಮುಸ್ಲಿಂ ನ್ಯಾಯಮೂರ್ತಿಗಳು ಇಲ್ಲ ಎನ್ನುವ ಕಾರಣಕ್ಕೆ) ಎಂದು ಎಸ್‌ಜಿ ಹೇಳಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, "ಏನು ಹೇಳುತ್ತಿದ್ದೀರಿ! ನಾವು ಇಲ್ಲಿ ಕುಳಿತಾಗ ನಾವು ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತೇವೆ. ನಮಗೆ ಎರಡೂ ಕಡೆಯವರು ಒಂದೇ. ನೀವು ಇದನ್ನು ನ್ಯಾಯಮೂರ್ತಿಗಳೊಂದಿಗೆ ಹೇಗೆ ಹೋಲಿಸಬಹುದು? ಹಾಗಾದರೆ ಹಿಂದೂ ದತ್ತಿಗಳ ಸಲಹಾ ಮಂಡಳಿಯಲ್ಲಿ ಮುಸ್ಲಿಮೇತರರು ಏಕೆ ಇರಬಾರದು?" ಎಂದು ನ್ಯಾಯಾಲಯ ಪ್ರಶ್ನಿಸಿತು.

" ಇಬ್ಬರು ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ಗರಿಷ್ಠ ಇಬ್ಬರು (ಮಾತ್ರ) ಮುಸ್ಲಿಮೇತರರು ಇರುತ್ತಾರೆ ಎಂದು ನೀವು ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಸಿದ್ಧರಿದ್ದೀರಾ " ಎಂಬುದಾಗಿ ಪೀಠ ಪಟ್ಟುಹಿಡಿಯಿತು.

"ನಾನು ಅದನ್ನು ಅಫಿಡವಿಟ್‌ ಮುಖೇನ ಹೇಳಬಲ್ಲೆ" ಎಂದು ಎಸ್‌ಜಿ ಭರವಸೆ ನೀಡಿದರು.

ಈಚೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ಕಾಯಿದೆಯನ್ನು ಪ್ರಶ್ನಿಸಿ ಹಲವು ವ್ಯಕ್ತಿಗಳು, ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.