ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂಪಿಸಿರುವ ಕಾನೂನು ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿಗಳಾದ, ಅಟಾರ್ನಿ ಜನರಲ್ (ಎಜಿ) ಮತ್ತು ಸಾಲಿಸಿಟರ್ ಜನರಲ್ (ಎಸ್‌ಜಿ) ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಒತ್ತಾಯಿಸಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದ ಹೆಸರುಗಳನ್ನು ಅಂಗೀಕರಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಗಮನಿಸಿರುವ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರನ್ನೊಳಗೊಂಡ ಪೀಠ, ʼನ್ಯಾಯಾಲಯವು ನಿಗದಿಪಡಿಸಿದ ಗಡುವಿಗೆ ಬದ್ಧವಾಗಿರುವಂತೆ ಸೂಚಿಸಿದೆ.
“ನ್ಯಾಯಾಲಯ ಎತ್ತಿಹಿಡಿದಿರುವ ನೆಲದ ಕಾನೂನನ್ನು ಪಾಲಿಸುವಂತೆ ಎಸ್‌ಜಿ ಮತ್ತು ಎಜಿ ನೋಡಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ…. ನಾನು ಯೋಚನೆಗೀಡಾಗಿಲ್ಲ ಎಂದು ಅಂದುಕೊಂಡಿದ್ದೀರಾ? ನಾನು ತುಂಬಾ ಚಿಂತಿತನಾಗಿದ್ದೇನೆ. ಎಜಿ ಮತ್ತು ಎಸ್‌ಜಿ ಮಾತುಗಳನ್ನು ಸರ್ಕಾರ ಕೇಳುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಈ ನೆಲದ ಕಾನೂನಿಗೆ ತಾನು ಬದ್ಧವಾಗಿಲ್ಲ ಎಂದು ಸರ್ಕಾರ ಇಂದು ಹೇಳಿದರೆ ಮತ್ತೊಂದು ವಿಚಾರದಲ್ಲಿ ಮತ್ತಿನ್ನಾರಾದರೂ ಇದೇ ರೀತಿ ಹೇಳುತ್ತಾರೆ. ನೀವು ವಿಸ್ತೃತವಾಗಿ ಆಲೋಚಿಸಬೇಕು ಅಟಾರ್ನಿ ಜನರಲ್ ಅವರೇ” ಎಂದು ನ್ಯಾ. ಕೌಲ್ ಹೇಳಿದರು.
ಕೊಲಿಜಿಯಂ ಪ್ರಸ್ತಾಪಿಸಿದ ಪದೋನ್ನತಿಗೆ ಅನುಮೋದನೆ ನೀಡಲು ವಿಳಂಬ ಮಾಡುವುದನ್ನು ಪ್ರಶ್ನಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.
ತಮ್ಮ ಹೆಸರನ್ನು ಶಿಫಾರಸ್ಸು ಮಾಡಿದ ನಂತರವೂ ಒಂದು ವರ್ಷಕ್ಕೂ ಹೆಚ್ಚು ಕಾಲ ನೇಮಕಾತಿ ಬಗ್ಗೆ ಏನೂ ತಿಳಿಸದೆ ಆ ಬಳಿಕ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದರಿಂದ ತಮ್ಮ ಸಮ್ಮತಿ ಹಿಂಪಡೆದ ಹಿರಿಯ ನ್ಯಾಯವಾದಿ ಆದಿತ್ಯ ಸೋಂಧಿ ಅವರು ವಿಚಾರವನ್ನು ನ್ಯಾ. ಕೌಲ್ ಪ್ರಸ್ತಾಪಿಸಿದರು. ನ್ಯಾ. ಕೌಲ್ "ನೀವು (ನ್ಯಾಯಮೂರ್ತಿಗಳ) ಹಿರಿತನವನ್ನು ಸಂಪೂರ್ಣ ಹಾಳುಗೆಡವುತ್ತೀರಿ. ಕೊಲಿಜಿಯಂ ಇದೆಲ್ಲವನ್ನೂ ಪರಿಗಣಿಸಲಿದೆ. ಇದು ತುಂಬಾ ಕಷ್ಟಕರ ಪರಿಸ್ಥಿತಿಯಾಗಿದ್ದು ಎನ್‌ಎಲ್‌ಎಸ್‌ನಿಂದ ಮೊದಲ ತಲೆಮಾರಿನ ವಕೀಲರನ್ನು ಪಡೆಯುವುದು ತುಂಬಾ ಕಷ್ಟಕರವಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ವಕೀಲರ ಸಂಘದ ಪರವಾಗಿ ಹಾಜರಿದ್ದ ಹಿರಿಯ ನ್ಯಾಯವಾದಿ ಹಾಗೂ ಸಂಘದ ಅಧ್ಯಕ್ಷರೂ ಆಗಿರುವ ವಿಕಾಸ್ ಸಿಂಗ್ "ನ್ಯಾಯಾಂಗ ನಿಂದನೆ ನೋಟಿಸನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ಸಲಹೆಯಿತ್ತರು. ಆದರೆ ಪೀಠ ಎಜಿ ಮತ್ತು ಎಸ್‌ಜಿ ಇಬ್ಬರೂ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆಯೊಂದಿಗೆ ಸಿಂಗ್ ಅವರ ಸಲಹೆಯನ್ನು ನಿರಾಕರಿಸಿತು.