Delhi High Court 
ಸುದ್ದಿಗಳು

'ಕರೇವಾ' ವಿವಾಹದಿಂದ ಜನಿಸುವ ಮಕ್ಕಳ ಕಾನೂನುಬದ್ಧ ಹಕ್ಕುಗಳ ಕುರಿತು ಪರಿಶೀಲಿಸಲಿದೆ ದೆಹಲಿ ಹೈಕೋರ್ಟ್

ಮೃತ ಸಹೋದರನ ಪತ್ನಿಯನ್ನು ವಿವಾಹವಾಗುವುದನ್ನು 'ಕರೇವಾ' ಪದ್ದತಿ ಎನ್ನುತ್ತಾರೆ. ಈ ಪದ್ದತಿ ಉತ್ತರ ಭಾರತದ ಕೆಲ ಸಮುದಾಯಗಳಲ್ಲಿ ಆಚರಣೆಯಲ್ಲಿದೆ.

Bar & Bench

'ಕರೇವಾ' ವಿವಾಹಗಳಿಂದ ಜನಿಸಿದ ಮಕ್ಕಳ ಕಾನೂನು ಹಕ್ಕುಗಳನ್ನು ಪರಿಶೀಲಿಸುವುದಾಗಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕಾನೂನುಬದ್ಧ ಉತ್ತರಾಧಿಕಾರಿಗಳ ಮೂಲಕ ಆಜಾದ್ ಸಿಂಗ್ (ಮೃತ) ಮತ್ತು ದೇವಿ ಸಿಂಗ್ ಇನ್ನಿತರರ ನಡುವಣ ಪ್ರಕರಣ].

ಮೃತ ಸಹೋದರನ ಪತ್ನಿಯನ್ನು ವಿವಾಹವಾಗುವುದನ್ನು ಕರೇವಾ ಮದುವೆ ಪದ್ದತಿ ಎನ್ನುತ್ತಾರೆ. ಈ ಪದ್ದತಿ ಉತ್ತರ ಭಾರತದ ಕೆಲ ಸಮುದಾಯಗಳಲ್ಲಿ ರೂಢಿಯಲ್ಲಿದೆ. ಅಂತಹ ವಿವಾಹ ಪದ್ದತಿಗಳಲ್ಲಿ ಮೃತ ಸಹೋದರನ ಪತ್ನಿ ಗಂಡನ ಸಹೋದರನೊಂದಿಗೆ ಸಂಸಾರ ನಡೆಸುತ್ತಾಳೆ. ಆದರೆ ಇದು ಕಟ್ಟುನಿಟ್ಟಾದ ಸಾಂಪ್ರದಾಯಿಕ ಅಥವಾ ಕಾನೂನುಬದ್ಧ ವಿವಾಹವಾಗಿರುವುದಿಲ್ಲ.

ಮೇ 19 ರಂದು ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು 'ಕರೇವಾ' ವಿವಾಹದಿಂದ ಜನಿಸುವ ಮಕ್ಕಳ ಕಾನೂನುಬದ್ಧ ಹಕ್ಕುಗಳ ಕುರಿತಾದ ಕಾನೂನಾತ್ಮಕ ಪ್ರಶ್ನೆಗಳನ್ನು ರೂಪಿಸುವುದಾಗಿ ತಿಳಿಸಿದರು. ಆ ಮೂಲಕ ಪ್ರಕರಣವು ವಿಸ್ತೃತ ನೆಲೆಯಲ್ಲಿ ಎತ್ತಿರುವ ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಬಗ್ಗೆ ನ್ಯಾಯಾಲಯ ತಿಳಿಸಿತು.

ಕರೇವಾ ವಿವಾಹ ಸಂಬಂಧಿಂದ ಜನಿಸಿದ ಮಕ್ಕಳು ಹಾಗೂ ಕಾನೂನುಬದ್ಧ ವಿವಾಹದಿಂದ ಜನಿಸಿದ ಮಕ್ಕಳ ನಡುವಿನ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು. ದಿವಂಗತ ಅಜಾದ್‌ ಸಿಂಗ್‌ ಎಂಬುವರ ಕಾನುನುಬದ್ಧ ಉತ್ತರಾಧಿಕಾರಿಗಳು ತಮ್ಮ ತಂದೆಗೆ ಇತರೆ ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ (ಕರೇವಾ ಸಂಬಂಧ) ಆಸ್ತಿಯಲ್ಲಿ ಹಕ್ಕು ಇಲ್ಲ ಎಂದು ವಾದಿಸಿ ದಾಖಲಿಸಿದ್ದ ಪ್ರಕರಣ ಇದಾಗಿದೆ.

ನ್ಯಾಯಾಲಯವು ಪ್ರತಿವಾದಿಗಳಾದ ಕರೇವಾ ಮದುವೆಯಿಂದ ಜನಿಸಿದ ಮಕ್ಕಳಿಗೆ ನೋಟಿಸ್ ಜಾರಿ ಮಾಡಿದೆ. ಆದರೆ ಪ್ರತಿ ಅಫಿಡವಿಟ್‌ ಸಲ್ಲಿಸುವಂತೇನೂ ತಾನು ಸೂಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Azad_Singh__Deceased__Through_Legal_Heirs_v_Devi_Singh___Ors.pdf
Preview