Supreme Court Collegium 
ಸುದ್ದಿಗಳು

"ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಲು ಗಡುವು ಪಾಲಿಸದಿದ್ದರೆ ಏನಾಗುತ್ತದೆ?" ಸುಪ್ರೀಂ ಕೋರ್ಟ್‌ ಪ್ರಶ್ನೆ

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ರಾಷ್ಟ್ರಪತಿಯವರು ಸಲ್ಲಿಸಿದ್ದ ಶಿಫಾರಸ್ಸಿನ ವಿಚಾರಣೆ ಪೀಠದಲ್ಲಿ ನಡೆಯಿತು.

Bar & Bench

ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವ ಅಧಿಕಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಗಡುವು ನಿಗದಿಪಡಿಸುವ ತನ್ನ ಅಧಿಕಾರ ಮತ್ತು ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮಾನ ವ್ಯಕ್ತಪಡಿಸಿದೆ.

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು  ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಯವರು ಮಾಡಿದ್ದ ಶಿಫಾರಸ್ಸಿನ ವಿಚಾರಣೆ  ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠದಲ್ಲಿ ನಡೆಯಿತು.

ಇಂದಿನ ವಿಚಾರಣೆ ವೇಳೆ ನ್ಯಾಯಾಲಯ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವು ಪಾಲಿಸದಿದ್ದರೆ ಏನಾಗುತ್ತದೆ ಎಂದು ಪ್ರಶ್ನೆ ಹಾಕಿತು.

ಜೊತೆಗೆ ʼಗಡುವನ್ನು 200, 201ನೇ ವಿಧಿಯಲ್ಲಿ ಸೇರಿಸಲು ಸಂವಿಧಾನವನ್ನೇ ತಿದ್ದುಪಡಿ ಮಾಡಬೇಕು ಎಂದು ನ್ಯಾ. ವಿಕ್ರಮ್‌ ನಾಥ್‌ ತಿಳಿಸಿದರು.

ರಾಜ್ಯಪಾಲರು ಅಂಕಿತ ಹಾಕದ ಮಸೂದೆಗಳನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಳ್ಳಬಹುದೇ ಎಂಬುದಾಗಿ ನ್ಯಾಯಾಲಯ ಪ್ರಶ್ನಿಸಿತು.

"ಈ ನ್ಯಾಯಾಲಯವು ರಾಜ್ಯಪಾಲರ ಸ್ಥಾನದಲ್ಲಿ ಕುಳಿತು ಅವರಿಗಿರುವ ಮೂರು ಆಯ್ಕೆಗಳನ್ನು ಪರಿಗಣಿಸಬಹುದೇ...? " ಎಂದು ನ್ಯಾ. ವಿಕ್ರಮ್‌ ನಾಥ್ ಕೇಳಿದರು.

ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಇಂದು ತಮ್ಮ ವಾದವನ್ನು ಮುಂದುವರೆಸಿದರು. ಮಸೂದೆಯನ್ನು ವಜಾಗೊಳಿಸುವ ಅಧಿಕಾರ ಸಚಿವ ಸಂಪುಟಕ್ಕಷ್ಟೇ ಇದೆಯೇ ವಿನಾ ಬೇರಾರಿಗೂ ಅಲ್ಲ ಎಂದರು.

ರಾಜ್ಯಪಾಲರ ನಿಷ್ಕ್ರಿಯತೆಯ ನ್ಯಾಯಾಂಗ ಪರಿಶೀಲನೆಯನ್ನು ಸಮರ್ಥಿಸಿಕೊಂಡ ಸಿಂಘ್ವಿ ನ್ಯಾಯಾಲಯಗಳು  ತಮಗಿರುವ ನಿಷಿದ್ಧ ವಲಯದ ಬಗ್ಗೆ, ಯಾವಾಗ ಮಧ್ಯಪ್ರವೇಶಿಸಬೇಕು ಎನ್ನುವ ಬಗ್ಗೆ ಅರಿತಿವೆ ಎಂದು ಹೇಳಿದರು.

ಗವರ್ನರ್ ಸೂಪರ್ ಸಿಎಂ ಆಗುವಂತಿಲ್ಲ, ಗಡುವು ಅತ್ಯಗತ್ಯ ಎಂದು ಅವರು ಸಮರ್ಥಿಸಿದರು. ಒಂದೊಮ್ಮೆ ಅಂಕಿತ ಹಾಕದೆ ದೀರ್ಘ ಅವಧಿಯವರೆಗೆ ಬಾಕಿ ಉಳಿಸಿಕೊಂಡರೆ ನ್ಯಾಯಾಲಯದ ಆದೇಶದಂತೆ ರಾಜ್ಯಪಾಲರ ಒಪ್ಪಿಗೆ ದೊರೆತಿದೆ ಎಂದೇ ಭಾವಿಸಿ ಮಸೂದೆ ಜಾರಿಗೊಳಿಸಬೇಕಾಗುತ್ತದೆ ಎಂದರು.

ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ , ಜನಪ್ರತಿನಿಧಿಗಳ ಇಚ್ಛೆಯನ್ನು ತಡೆಹಿಡಿಯಲು ಗವರ್ನರ್‌ಗೆ ಅಧಿಕಾರ ಇಲ್ಲ ಜೊತೆಗೆ ಕಾರ್ಯಾಂಗಕ್ಕೆ ಶಾಸನ ರೂಪಿಸುವ ಅಧಿಕಾರ ಇಲ್ಲ. ರಾಷ್ಟ್ರಪತಿ ಮತ್ತು ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಆಧರಿಸಿಯೇ ಕಾರ್ಯನಿರ್ವಹಿಸಬೇಕು ಎಂದರು.

ಸಂವಿಧಾನ ಚಾಲ್ತಿಯಲ್ಲಿರುವಂತೆ ನ್ಯಾಯಾಲಯದ ವ್ಯಾಖ್ಯಾನಗಳಿರಬೇಕು. ವಿಧಾನಸಭೆಯ ಇಂಗಿತಗಳನ್ನು ರಾಜ್ಯಪಾಲರು ಮೀರಲಾಗದು. ಅದು ಸಂವಿಧಾನಕ್ಕೆ ವಿರುದ್ಧ. ರಾಜ್ಯಪಾಲರ ಅಧಿಕಾರ ಕುರಿತಂತೆ ನ್ಯಾಯಾಲಯ ವಹಿಸುವ ಪಾತ್ರ ನಿರ್ಣಾಯಕವಾದುದು. ನ್ಯಾಯಾಲಯದ ತೀರ್ಪೇ ದಾರಿ ತೋರಲಿ ಎಂದು ಕೋರಿದರು.

ಆದರೆ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ ಕಳೆದ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿದರು. ನ್ಯಾಯಾಲಯ ಸಂವಿಧಾನವನ್ನು ಮತ್ತೆ ಬರೆಯಬಹುದೇ ಎಂದು ಕೇಳಿದರು.