
ರಾಜ್ಯ ಶಾಸಕಾಂಗ ಅಂಗೀಕರಿಸಿದ ಹಣಕಾಸು ಮಸೂದೆಗಳಿಗೂ ರಾಜ್ಯಪಾಲರು ಅಂಕಿತ ಹಾಕದೆ ಇರಬಹುದು ಎಂಬುದನ್ನು ಒಪ್ಪಿಕೊಂಡರೆ ಅವರು "ಸೂಪರ್ ಮುಖ್ಯಮಂತ್ರಿ" ಆಗಿಬಿಡುತ್ತಾರೆ ಎಂದು ತಮಿಳುನಾಡು ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಮುಂದೆ ವಾದಿಸಿತು.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳಲು ಗಡುವು ವಿಧಿಸಿ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರಪತಿಯವರು ಸಲ್ಲಿಸಿದ್ದ ಶಿಫಾರಸ್ಸಿನ ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠದೆದುರು ಈ ವಾದ ಮಂಡಿಸಿದರು.
ಆಗಸ್ಟ್ 26 ರಂದು ಮಹಾರಾಷ್ಟ್ರ ಸರ್ಕಾರದ ವಕೀಲರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ರಾಜ್ಯಪಾಲರು ಹಣಕಾಸು ಮಸೂದೆಗಳಿಗೂ ಒಪ್ಪಿಗೆ ನಿರಾಕರಿಸಬಹುದು ಎಂದು ಸಲ್ಲಿಸಿದ್ದ ಅರ್ಜಿಗೆ ಸಿಂಘ್ವಿ ಪ್ರತಿಕ್ರಿಯೆ ನೀಡಿದರು.
"ರಾಜ್ಯಪಾಲರು ಕೇವಲ ಉನ್ನತಾಧಿಕಾರದ ಸ್ಥಾನದಲ್ಲಿರದೆ, ಸೂಪರ್ ಮುಖ್ಯಮಂತ್ರಿ ಆಗಿಬಿಡುತ್ತಾರೆ ಎಂಬ ವಾದಕ್ಕೆ ಇದು ಹೊಂದಿಕೆಯಾಗುತ್ತದೆ... ಬಹುಶಃ ಸೂಪರ್ ಮುಖ್ಯಮಂತ್ರಿಗೂ ಮಿಗಿಲಾದ ಅಧಿಕಾರ ದೊರೆಯುತ್ತದೆ” ಎಂದು ಸಿಂಘ್ವಿ ವಾದಿಸಿದರು.
ರಾಜ್ಯಪಾಲರ ಶಿಫಾರಸಿನೊಂದಿಗೆ ಮಂಡಿಸಲಾದ ಹಣದ ಮಸೂದೆಗಳ ಸಂದರ್ಭದಲ್ಲಿ 207ನೇ ವಿಧಿ ಅನ್ವಯವಾಗುತ್ತದೆ ಮತ್ತು ಆದ್ದರಿಂದ ಒಪ್ಪಿಗೆಯನ್ನು ತಡೆಹಿಡಿಯುವ ಪ್ರಶ್ನೆಯು ಅನ್ವಯಿಸುವುದಿಲ್ಲ ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ಪ್ರತಿಕ್ರಿಯಿಸುತ್ತಾ, 207ನೇ ವಿಧಿ ಖಾಸಗಿ ಸದಸ್ಯರ ಹಣಕಾಸು ಮಸೂದೆಗಳನ್ನು ತಡೆಗಟ್ಟುವ ಗುರಿ ಹೊಂದಿದೆ ಎಂದು ಹೇಳಿದರು. ಹಣಕಾಸು ಮಸೂದೆಗಳ ವಿಚಾರದಲ್ಲಿಯೂ ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಬದ್ಧರಾಗಿರಬೇಕು ಎಂದು ಅವರು ಹೇಳಿದರು.
ಮಸೂದೆಗೆ ಸಂಬಂಧಿಸಿದಂತೆ ಆತ್ಯಂತಿಕ ಮಾತು ರಾಜ್ಯಪಾಲರದ್ದೇ ಆಗಿರಬೇಕೇ ವಿನಾ ಚುನಾಯಿತ ಸರ್ಕಾರದ್ದಲ್ಲ ಎಂದು ಸಂವಿಧಾನದಲ್ಲಿ ಎಲ್ಲಿಯಾದರೂ ಹೇಳಲಾಗಿದೆಯೇ ಎಂಬುದಾಗಿ ಸಿಂಘ್ವಿ ಕೇಳಿದರು. ನ್ಯಾಯಾಲಯ ಮುಂದಿನ ವಾರವೂ ಪ್ರಕರಣ ಆಲಿಸಲಿದೆ.
ರಾಷ್ಟ್ರಪತಿಗಳು ಕೇಳಿದ್ದ 14 ನೇ ಪ್ರಶ್ನೆಗಳಲ್ಲಿ ಎರಡಕ್ಕೆ ಉತ್ತರಿಸಲು ಬಯಸುವುದಿಲ್ಲ. ಅವುಗಳನ್ನು ಹಿಂಪಡೆಯಬಹುದೇ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 21ರಂದು ಕೇಳಿತ್ತು. ಸೂಚನೆಗಳನ್ನು ಪಡೆಯಲು ಸಮಯ ತೆಗೆದುಕೊಂಡಿದ್ದ ಎಸ್‌ಜಿ ಮೆಹ್ತಾ, ರಾಷ್ಟ್ರಪತಿಗಳು ನ್ಯಾಯಾಲಯವು ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಬಯಸುತ್ತಾರೆ ಎಂದು ಇಂದು ತಿಳಿಸಿದರು.
ರಾಷ್ಟ್ರಪತಿಗಳು ಕೇಳಿದ್ದ ಆ ಎರಡು ಪ್ರಶ್ನೆಗಳು ಈ ರೀತಿ ಇವೆ:
ಸಂವಿಧಾನದ 131ನೇ ವಿಧಿಯಡಿ ಮೊಕದ್ದಮೆ ಹೂಡುವುದನ್ನು ಹೊರತುಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಜ್ಯ ಪರಿಹರಿಸಲು ಸುಪ್ರೀಂ ಕೋರ್ಟ್‌ನ ಯಾವುದೇ ಇತರ ನ್ಯಾಯವ್ಯಾಪ್ತಿಯನ್ನು ಸಂವಿಧಾನ ನಿಷೇಧಿಸುತ್ತದೆಯೇ?
ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರ ಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಯನ್ನು ಸಂವಿಧಾನದ 361ನೇ ವಿಧಿ ಸಂಪೂರ್ಣ ನಿರ್ಬಂಧಿಸುತ್ತದೆಯೇ?