ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎನ್ನುವ ಕುರಿತು ಸಂವಿಧಾನದ 143ನೇ ವಿಧಿಯಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತನ್ನ ಸಲಹೆ ಕೋರಿ ಮಾಡಿದ್ದ ಶಿಫಾರಸ್ಸಿನ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಮೇಲ್ನೋಟಕ್ಕೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ.ಎಸ್. ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು, ರಾಷ್ಟ್ರಪತಿಗಳು ಪ್ರಕರಣದ ಬಗ್ಗೆ ನ್ಯಾಯಾಲಯದ ಅಭಿಪ್ರಾಯ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ.
ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ರಾಷ್ಟ್ರಪತಿಗಳ ಸುಪ್ರೀ ಕೋರ್ಟ್ ಸಲಹೆ ಕೋರಿ ಮಾಡಿರುವ ಶಿಫಾರಸ್ಸಿನ ನಿರ್ವಹಣೆಯನ್ನು ಪ್ರಶ್ನಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು “ರಾಷ್ಟ್ರಪತಿಗಳು ನ್ಯಾಯಾಲಯದ ಅಭಿಪ್ರಾಯ ಕೇಳಿದರೆ ಅದರಲ್ಲಿ ತಪ್ಪೇನಿದೆ. ಪ್ರಾಥಮಿಕ ಆಕ್ಷೇಪಣೆಗಳ ಬಗ್ಗೆ ನಿಜವಾಗಿಯೂ ಗಂಭೀರವಾಗಿ ಯೋಚಿಸಿದ್ದೀರಾ?" ಎಂದು ಸಿಜೆಐ ಗವಾಯಿ ಟೀಕಿಸಿದರು.
ನ್ಯಾಯಾಲಯ ಮೇಲ್ಮನವಿಯನ್ನು ಆಲಿಸುತ್ತಿಲ್ಲ ಬದಲಿಗೆ ಸಲಹೆ ನೀಡುತ್ತಿದೆ ಎಂದು ಪೀಠ ಸ್ಪಷ್ಟಪಡಿಸಿತು. ತೀರ್ಪು ಸರಿ ಇಲ್ಲ ಎಂದು ಒಂದು ವೇಳೆ ನ್ಯಾಯಾಲಯ ಅಭಿಪ್ರಾಯ ನೀಡಿದರೂ ಅದು ಈಗಾಗಲೇ ಹೊರಡಿಸಲಾದ ತೀರ್ಪನ್ನು ರದ್ದುಗೊಳಿಸದು ಎಂದು ಅದು ಹೇಳಿತು.
ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಗಡುವು ನಿಗದಿಪಡಿಸಿದ ಮತ್ತು 200ನೇ ವಿಧಿಯಡಿ (ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ ರಾಜ್ಯಪಾಲರ ಅಧಿಕಾರ) ರಾಜ್ಯಪಾಲರ ನಿಷ್ಕ್ರಿಯತೆ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪನ್ನು ರಾಷ್ಟ್ರಪತಿಗಳ ಶಿಫಾರಸ್ಸು ಪ್ರಶ್ನಿಸಿತ್ತು.
ತಮಿಳುನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಸೂಕ್ತ ಸಮಯದೊಳಗೆ ಕಾರ್ಯ ನಿರ್ವಹಿಸಬೇಕು ಮತ್ತು ಅವರ ಸಾಂವಿಧಾನಿಕ ಮೌನ ಪ್ರಜಾಪ್ರಭುತ್ವ ಪ್ರಕ್ರಿಯೆ ಅಡ್ಡಿಪಡಿಸುವುದಕ್ಕೆ ಬಳಕೆಯಾಗಬಾರದು ಎಂದು ತೀರ್ಪು ನೀಡಿತ್ತು.
200ನೇ ವಿಧಿ ಕಾಲಮಿತಿಯ ಬಗ್ಗೆ ಹೇಳದೆ ಇದ್ದರೂ ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳ ಮೇಲೆ ರಾಜ್ಯಪಾಲರು ಅನಿರ್ದಿಷ್ಟ ಅವಧಿಯವರೆಗೆ ವಿಳಂಬ ಮಾಡುವುದನ್ನು ಅನುಮತಿಸಲು ಅದನ್ನು ವ್ಯಾಖ್ಯಾನಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಹದಿನಾಲ್ಕು ಪ್ರಶ್ನೆಗಳನ್ನು ಕೇಳಿ ಸುಪ್ರೀಂ ಕೋರ್ಟ್ ಪರಿಶೀಲನೆಗೆ ಉಲ್ಲೇಖಿಸಿ ಶಿಫಾರಸ್ಸು ಮಾಡಿದ್ದರು. ತೀರ್ಪು ಸಮ್ಮತಿಯ ಸಾಂವಿಧಾನಿಕ ಎಲ್ಲೆಯನ್ನು ದಾಟಿದೆಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ಅಂತಹ ಗಡುವುಗಳನ್ನು ನ್ಯಾಯಾಂಗ ವಿಧಿಸಬಹುದೇ ಮತ್ತು 142ನೇ ವಿಧಿ ಬಳಸಿ ಅವುಗಳನ್ನು ಉಳಿಸಿಕೊಳ್ಳಬಹುದೇ ಎಂಬ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ಗೆ ದ್ರೌಪದಿ ಮುರ್ಮು ಕೇಳಿದ್ದರು.
ಆದರೆ ರಾಷ್ಟ್ರಪತಿಯವರು ಕಳುಹಿಸಿರುವ ಶಿಫಾರಸ್ಸು ನಿರ್ವಹಣಾರ್ಹವಲ್ಲ ಎಂದು ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು. ತೀರ್ಪುಗಳನ್ನು ಬದಿಗೆ ಸರಿಸುವಂತೆ ಮಾಡಲು ಇದೊಂದು ಪರೋಕ್ಷ ಯತ್ನ ಎಂದಿದ್ದ ಅದು ಶಿಫಾರಸ್ಸಿಗೆ ಪ್ರತಿಕ್ರಿಯಿಸದೆ ಸುಪ್ರೀಂ ಕೋರ್ಟ್ ಅದನ್ನು ರಾಷ್ಟ್ರಪತಿಯವರಿಗೆ ಮರಳಿಸಬೇಕು ಎಂದು ಕೋರಿತ್ತು. ತಮಿಳುನಾಡು ಸರ್ಕಾರ ಕೂಡ ಇಂಥದ್ದೇ ಅರ್ಜಿ ಸಲ್ಲಿಸಿತ್ತು.
ಇತ್ತ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಶಿಫಾರಸ್ಸಿಗೆ ಬೆಂಬಲ ಸೂಚಿಸಿತ್ತು. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಅಧಿಕಾರ ಪ್ರಭುತ್ವದ ವಿಶೇಷಾಧಿಕಾರವಾಗಿದ್ದು ಅದಕ್ಕೆ ಕಾಲಮಿತಿ ವಿಧಿಸಿ ನ್ಯಾಯಾಂಗ ನಿರ್ಬಂಧಿಸುವಂತಿಲ್ಲ ಎಂದು ವಾದಿಸಿತ್ತು.
ಇಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇರಳ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಕೆ ಕೆ ವೇಣುಗೋಪಾಲ್, ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು ಹಿರಿಯ ವಕೀಲರಾದ ನೀರಜ್ ಕಿಶನ್ ಕೌಲ್ ಮಧ್ಯಪ್ರದೇಶ ಸರ್ಕಾರವನ್ನು; ಹರೀಶ ಸಾಳ್ವೆ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು. ಮತ್ತೊಬ್ಬ ಹಿರಿಯ ನ್ಯಾಯವಾದಿ ಮಣಿಂದರ್ ಸಿಂಗ್ ರಾಷ್ಟಪತಿಗಳ ಶಿಫಾರಸ್ಸನ್ನು ಬೆಂಬಲಿಸಿ ವಾದ ಮಂಡಿಸಿದರು.